ವಿದ್ಯಾರ್ಥಿಗಳು ಸಾಂವಿಧಾನಿಕ ಹಕ್ಕು, ಜವಾಬ್ದಾರಿ ನಿರ್ವಹಿಸಬೇಕು: ಎಸ್.ವಿ.ಲೋಕೇಶ್

| Published : May 18 2025, 01:20 AM IST

ಸಾರಾಂಶ

ಮಳವಳ್ಳಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಭೂಮಿ ಹಸ್ತಾಂತರಿಸಲಾಗಿದೆ. ಅಲ್ಲದೇ, ಅನುದಾನವು ಸಹ ಬಿಡುಗಡೆಯಾಗಿದೆ. ಶೀಘ್ರ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಜೊತೆಗೆ ಕ್ಲಿಷ್ಟಕರ ಸಂದರ್ಭದಲ್ಲಿ ದೇಶ ಸೇವೆ ಸಲ್ಲಿಸುವ ಮೂಲಕ ಸಾಂವಿಧಾನಿಕ ಹಕ್ಕು, ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ, ಎನ್ಎಸ್ಎಸ್, ಸ್ಕೌಡ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದಿ ಸಾಧನೆ ಮಾಡಬೇಕು. ಭವಿಷ್ಯದ ನೀತಿ ನಿಯಮಗಳ ಅಳವಡಿಕೆಗೆ ಮುಂದಾಗಬೇಕು. ಸಂವಿಧಾನದಲ್ಲಿನ ಹಕ್ಕು ಮತ್ತು ಕರ್ತವ್ಯಗಳ ಪಾಲನೆ, ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸಬೇಕು ಎಂದರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಭೂಮಿ ಹಸ್ತಾಂತರಿಸಲಾಗಿದೆ. ಅಲ್ಲದೇ, ಅನುದಾನವು ಸಹ ಬಿಡುಗಡೆಯಾಗಿದೆ. ಶೀಘ್ರ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ರವೀಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಬೆಳಕವಾಡಿ ಶಿವಕುಮಾರಸ್ವಾಮಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ಪ್ರಧಾನ ಭಾಷಣ ಮಾಡಿದರು. ಪ್ರಾಂಶುಪಾಲೆ ಡಿ.ಯಶೋಧ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಅಭಿವೃದ್ಧಿ ಸಮಿತಿ ಸದಸ್ಯರಾದ ಸುಹಾಸಿನಿ, ಮಹದೇವಮ್ಮ, ಅಯೂಬ್ ಪಾಷ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿದ್ಧಾರ್ಥ ಪಾಲ್ಗೊಂಡಿದ್ದರು.