ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು: ಡಾ. ನವೀನ್ ಲಾಯ್ಡ್ ಮಿಸ್ಕಿತ್

| Published : Feb 06 2025, 12:18 AM IST

ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು: ಡಾ. ನವೀನ್ ಲಾಯ್ಡ್ ಮಿಸ್ಕಿತ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ವಿದ್ಯಾರ್ಥಿಗಳು ಭಯ ಬಿಟ್ಟು ಧೈರ್ಯ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದ ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಜೇಸಿ ತರಬೇತಿದಾರ ಡಾ.ನವೀನ್ ಲಾಯ್ಡ್ ಮಿಸ್ಕಿತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

- ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಪರೀಕ್ಷೆ ಎದುರಿಸುವುದು ಹೇಗೆ, ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿದ್ಯಾರ್ಥಿಗಳು ಭಯ ಬಿಟ್ಟು ಧೈರ್ಯ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದ ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಜೇಸಿ ತರಬೇತಿದಾರ ಡಾ.ನವೀನ್ ಲಾಯ್ಡ್ ಮಿಸ್ಕಿತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬುಧವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲಾ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಇಟ್ಟುಕೊಳ್ಳಬೇಕು. ಪರೀಕ್ಷೆ ಎದುರಿಸುವ ಮುನ್ನ ವರ್ಷವಿಡೀ ಕಲಿತಿರುವುದನ್ನು ಕ್ರಮ ಬದ್ಧವಾಗಿ ಪಟ್ಟಿ ಮಾಡಿ ಅದನ್ನು ಮನನ ಮಾಡಿಕೊಂಡು ಮನಸ್ಸಿನಲ್ಲಿ ದಾಖಲು ಮಾಡಿಕೊಳ್ಳಬೇಕು ಎಂದರು.

ಪರೀಕ್ಷೆ ಎಂದರೆ ಭಯಪಡಬಾರದು. ಎಸ್ ಎಸ್ ಎಲ್ ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಎಸ್ ಎಸ್ ಎಲ್ ಸಿಯನ್ನು ಮೆಟ್ಟಲಾಗಿಸಿಕೊಳ್ಳಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಜೇಸಿ ಸಂಸ್ಥೆ ಯುವ ಜನರ ವ್ಯಕ್ತಿತ್ವ ಬೆಳವಣಿಗೆಗೆ ಇರುವ ಏಕೈಕ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. 18-40 ವರ್ಷದ ಒಳಗಿನ ಯುವ ಜನರು ಜೇಸಿ ಸಂಸ್ಥೆ ಸದಸ್ಯರಾಗ ಬಹುದು. ಎಸ್.ಎಸ್.ಎಲ್.ಸಿ.ಪರೀಕ್ಷೆ ಹತ್ತಿರ ಬರುತ್ತಿದ್ದು ಜೇಸಿ ಸಂಸ್ಥೆ ನೀಡುತ್ತಿರುವ ಈ ತರಬೇತಿ ಪ್ರಯೋಜನ ಪಡೆದು ಕೊಳ್ಳಬೇಕು.ಈ ಶಾಲೆಯಲ್ಲಿ ಬರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದರೆ ಅಂತಹವರನ್ನು ಗುರುತಿಸಿ ತಾಲೂಕು ಕಸಾಪದಿಂದ ಸನ್ಮಾನಿಸಲಾಗುವುದು ಎಂದರು.

ಕರ್ನಾಟಕ್ ಪಬ್ಲಿಕ್ ಸ್ಕೂಲಿನ ಎಸ್ ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟಿ ಉದ್ಘಾಟಿಸಿ ಮಾತನಾಡಿ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸಮಾಜ ಮುಖಿ ಕೆಲಸ ಮಾಡುತ್ತಿದೆ. ಎಸ್ ಎಸ್ ಎಲ್ ಸಿ ಮಕ್ಕಳು ಉತ್ತಮ ಅಂಕ ಪಡೆಯಿರಿ ಎಂಬ ಉದ್ದೇಶ ದಿಂದ ಜೇಸಿ ತರಬೇತಿದಾರರನ್ನು ಕರೆಸಿ ಕರ್ನಾಟಕ ಪಬ್ಲಿಕ್ ಸ್ಕೂಲಿನ ಎಸ್ ಎಸ್ ಎಲ್ ಸಿ ಮಕ್ಕಳಿಗೆ ತರಬೇತಿ ನೀಡುತ್ತಿ ದ್ದಾರೆ. ವಿದ್ಯಾರ್ಥಿಗಳು ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಅಂಕ ಪಡೆದು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜೇಸಿ ತರಬೇತಿದಾರ ನವೀನ್ ಲಾಯ್ಡ್ ಮಿಸ್ಕತ್ ಅವರನ್ನು ಸನ್ಮಾನಿಸಲಾಯಿತು.ಜೇಸಿ ಸಂಸ್ಥೆಯಿಂದ ಎಲ್ಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.

ಸಭೆ ಅಧ್ಯಕ್ಷತೆಯನ್ನು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ ಗೌಡ ವಹಿಸಿದ್ದರು. ಅತಿಥಿಗಳಾಗಿ ಜೇಸಿ ನಿಕಟ ಪೂರ್ವ ಅಧ್ಯಕ್ಷ ಮನು, ಜೇಸಿ ಕಾರ್ಯದರ್ಶಿ ಮಿಥುನ್ ಗೌಡ, ಪ್ರೌಢ ಶಾಲೆ ಉಪನ್ಯಾಸಕ ರಾಮಪ್ಪ ಚೆಲುವಾದಿ, ಕೆಪಿಎಸ್ ನ ಎಸ್ ಡಿಎಂಸಿ ಸದಸ್ಯರಾದ ಉದಯ, ಮೇಘನ, ಜೇಸಿ ಸದಸ್ಯರಾದ ಶೆಟ್ಟಿಕೊಪ್ಪ ಜೋಯಿ,ದರ್ಶನ್, ಪವನ್ ಕರ್, ಸುಹಾಸ್, ಶಿಕ್ಷಕಿ ಮಂಜುಳ ಇದ್ದರು.