ಸಾರಾಂಶ
ಹುಬ್ಬಳ್ಳಿ: ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಿವೆ. ಧಾರವಾಡ ಜಿಲ್ಲೆಯಲ್ಲಿ 28,666 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 106 ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ನಗರದ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಲ್ಯಾಮಿಂಗ್ಟನ್ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಪಂ ಸಿಇಒ ಕಚೇರಿಯಲ್ಲಿ ಪ್ರತ್ಯೇಕ ತಂಡದಿಂದ ಸಿಸಿಟಿವಿ ಮಾನಿಟರಿಂಗ್ ಮಾನಿರ್ವಹಿಸಲಾಗುತ್ತಿದೆ. ಶುಕ್ರವಾರ 28,239 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 427 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಉತ್ತಮ ಸ್ಥಾನದ ನಿರೀಕ್ಷೆಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪತ್ರಗಳನ್ನು ಬರೆಯುವ ಮೂಲಕ ಶುಭಾಶಯ ಕೋರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶುಭಾಶಯ ಕೋರಿದ್ದಾರೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಖುಷಿಯಿಂದ ಪರೀಕ್ಷೆ ಎದುರಿಸಿ, ಜಿಲ್ಲೆಗೆ ಉತ್ತಮ ಸ್ಥಾನ ತರಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಸೂಕ್ತ ಕ್ರಮಕ್ಕೆ ಸೂಚನೆಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವೆಬ್ ಕಾಸ್ಟಿಂಗ್‌ಗೆ ಮಾಡಲಾಗುತ್ತಿದೆ. ವಿದ್ಯುತ್ ಹಾಗೂ ಇಂಟರ್ನೆಟ್ ಸಂಪರ್ಕದ ಸಮಸ್ಯೆಗಳಿಂದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ತೊಂದರೆಯಾಗುತ್ತಿದೆ. ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವೆಬ್ ಕಾಸ್ಟಿಂಗ್‌ಗೆ ಯಾವುದೇ ರೀತಿಯ ಅಡೆತಡೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.
ವಿಶೇಷ ಅಭಿಯಾನಜಿಲ್ಲೆಗೆ ಉತ್ತಮ ರ‍್ಯಾಂಕ್ ಪಡೆಯುವ ನಿಟ್ಟಿನಲ್ಲಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದ ಮೂಲಕ ಹಲವು ಬಗೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ಅನುಮತಿ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಹಾಜರಾತಿ ಅಭಿಯಾನ ಕೈಗೊಳ್ಳಲಾಗಿತ್ತು. ಸುಮಾರು 2 ಸಾವಿರ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದರು. ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮರಳಿ ಶಾಲೆಗೆ ಹಾಜರಾಗುವಂತೆ ಮಾಡಿದ್ದರು. ಇದರಿಂದ ಸುಮಾರು 450 ವಿದ್ಯಾರ್ಥಿಗಳು ಮರಳಿ ಶಾಲೆಗೆ ಕರೆತರಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಿದ್ದಲ್ಲಿ, ಅವರಿಗೆ ವೈದ್ಯಕೀಯ ಚಿಕಿತ್ಸೆ ಜತೆಗೆ ವಿದ್ಯಾಭ್ಯಾಸ ನೀಡುವ ಯೋಜನೆ ಸರ್ಕಾರ ಜಾರಿಗೆ ತಂದಿದೆ ಎಂದರು.
ಈ ವೇಳೆ ಜಿಪಂ ಸಿಇಒ ಭುವನೇಶ ಪಾಟೀಲ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ ಇದ್ದರು.