ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಬಗ್ಗೆ ಗಮನಹರಿಸಲಿ: ಶಾಸಕ ಬಾಲಕೃಷ್ಣ ಸಲಹೆ

| Published : Aug 14 2025, 01:00 AM IST

ಸಾರಾಂಶ

ಯುವ ಪೀಳಿಗೆ ಹಾಗೂ ಸಾರ್ವಜನಿಕರು ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಕಣ್ಣಿಗೆ ಹೆಚ್ಚು ತೊಂದರೆ ಆಗುತ್ತಿದೆ. ಪರಿಣಾಮವಾಗಿ ದೃಷ್ಟಿ ಕಳೆದುಕೊಳ್ಳುವ ಸಂದರ್ಭವೂ ಎದುರಾಗಿದೆ. ಆದ ಕಾರಣ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ನವೋದಯ ಸಂಸ್ಥೆಯ ಅಧ್ಯಕ್ಷ ಮಂಜುನಾಥ್‌ರವರ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಿದ್ದೇವೆ ,

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಗಮನಹರಿಸಬೇಕು. ವಿದ್ಯಾಭ್ಯಾಸದ ಸಂದರ್ಭದಲ್ಲಿ ವಿದ್ಯೆಗೆ ಗೌರವ ಸೂಚಿಸಬೇಕು ಹಾಗೂ ತಂದೆ- ತಾಯಿಗಳಿಗೆ ಗೌರವ ಸಿಗುವಂತೆ ನಡೆದುಕೊಳ್ಳಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿ ಕಿವಿಮಾತು ಹೇಳಿದರು.

ಪಟ್ಟಣದ ನವೋದಯ ವಿದ್ಯಾಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ತಮ್ಮ ಬಾಲ್ಯದ ವಿದ್ಯಾಭ್ಯಾಸದ ಸಮಯವನ್ನು ನೆನೆಸಿಕೊಳ್ಳುತ್ತಾ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು ಮತ್ತು ರೆಡ್ ಕ್ರಾಸ್ ಸಂಸ್ಥೆಯು ತಾಲೂಕಿನಲ್ಲಿ ಮಾಡುತ್ತಿರುವ ಸಮಾಜಮುಖಿ ಕಾರ್ಯವನ್ನು ಅಭಿನಂದಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಅಧ್ಯಕ್ಷ ಭರತ್ ಕುಮಾರ್ ಎಚ್. ಜಿ ಮಾತನಾಡಿ, ಯುವ ಪೀಳಿಗೆ ಹಾಗೂ ಸಾರ್ವಜನಿಕರು ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಕಣ್ಣಿಗೆ ಹೆಚ್ಚು ತೊಂದರೆ ಆಗುತ್ತಿದೆ. ಪರಿಣಾಮವಾಗಿ ದೃಷ್ಟಿ ಕಳೆದುಕೊಳ್ಳುವ ಸಂದರ್ಭವೂ ಎದುರಾಗಿದೆ. ಆದ ಕಾರಣ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ನವೋದಯ ಸಂಸ್ಥೆಯ ಅಧ್ಯಕ್ಷ ಮಂಜುನಾಥ್‌ರವರ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ನವೋದಯ ವಿದ್ಯಾಸಂಸ್ಥೆಯು ೮೦ ವರ್ಷಗಳ ಇತಿಹಾಸ ಹೊಂದಿದ್ದು, ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಟ್ಟಿದೆ, ವಿದ್ಯಾರ್ಥಿಗಳ ಹಾಗೂ ಬಡವರ ಪಾಲಿಗೆ ಆಶಾದಾಯಕವಾಗಿ ಉತ್ತಮ ಶಿಕ್ಷಣವನ್ನು ತಾಲೂಕಿನಲ್ಲಿ ನೀಡುತ್ತಾ ಬಂದಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ, ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಇತರೆ ಎಲ್ಲಾ ಚಟುವಟಿಕೆಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ೨೪೩ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಸಿಬ್ಬಂದಿ ಕಣ್ಣಿನ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಸಿ. ಎನ್. ಝಬಿವುಲ್ಲಾ ಬೇಗ್, ನವೋದಯ ಸಂಘದ ಕಾರ್ಯದರ್ಶಿ ಶರತ್, ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಒ. ಆರ್. ರಂಗೇಗೌಡ, ರಾಘವೇಂದ್ರ, ಆನಂದ್‌ ಕಾಳೇನಹಳ್ಳಿ, ಸಹ ಕಾರ್ಯದರ್ಶಿ ಸಂತೋಷ್, ಪ್ರಾಂಶುಪಾಲರಾದ ಸಂಜಯ್ ಕುಮಾರ್, ಉಪ ಪ್ರಾಂಶುಪಾಲರಾದ ಸುರೇಶ್ ಮತ್ತು ಇತರರು ಹಾಜರಿದ್ದರು.