ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಸದೀಯ ನಡವಳಿಕೆ, ವಿಧಾನಸಭೆ ಮತ್ತು ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಸ್ಪಷ್ಟ ಅರಿವು ಇರಬೇಕು.

ಕನ್ನಡಪ್ರಭ ವಾರ್ತೆ ಗದಗ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಸದೀಯ ನಡವಳಿಕೆ, ವಿಧಾನಸಭೆ ಮತ್ತು ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಯಾವುದೇ ರೀತಿಯ ತಾರತಮ್ಯಕ್ಕೆ ಆಸ್ಪದ ನೀಡದೆ, ಪಾರದರ್ಶಕವಾಗಿ ಚೀಟಿ ಎತ್ತುವ ಮೂಲಕವೇ ಪ್ರಮುಖ ಪಾತ್ರ (ಆಡಳಿತ ಪಕ್ಷ, ವಿರೋಧ ಪಕ್ಷ, ಮಾರ್ಷಲ್ ಇತ್ಯಾದಿ) ಹಂಚಿಕೆ ಮಾಡಬೇಕು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಪೂರ್ವ ಸಿದ್ಧತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರಸ್ತುತಿ, ವಿಷಯ ಮಂಡನೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ನಿಖರವಾಗಿ ಮೌಲ್ಯಮಾಪನ ಮಾಡಲು ಉಪನ್ಯಾಸಕರು ಹಾಗೂ ಸಮಿತಿಯ ಸದಸ್ಯರನ್ನೊಳಗೊಂಡ ತಜ್ಞರ ಮೌಲ್ಯಮಾಪನ ತಂಡವನ್ನು ರಚಿಸಬೇಕು. ಈ ತಂಡವು ಕಲಾಪವನ್ನು ನಿಗಾವಹಿಸಿ ಅತ್ಯುತ್ತಮವಾಗಿ ಪ್ರದರ್ಶನ ನೀಡುವ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದಿಂದ ಮುಂದಿನ ಹಂತಕ್ಕೆ ಆಯ್ಕೆ ಮಾಡಲಿದೆ ಎಂದರು.

ನೈಜ ಶಾಸಕರಂತೆ ವಿದ್ಯಾರ್ಥಿಗಳು ಕಲಾಪದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮುಂಚಿತವಾಗಿಯೇ ಸೂಕ್ತ ತರಬೇತಿ ಹಾಗೂ ಅಭ್ಯಾಸ ಕಲಾಪ ನಡೆಸುವುದು ಅತ್ಯಗತ್ಯ. ಚರ್ಚೆಗೆ ನೀಡುವ ವಿಷಯಗಳು ವಿದ್ಯಾರ್ಥಿಗಳ ವಯಸ್ಸಿಗೆ ಹಾಗೂ ಜ್ಞಾನಕ್ಕೆ ಸೂಕ್ತವಾಗಿರಬೇಕು ಎಂದರು.

ವಿದ್ಯಾರ್ಥಿಗಳನ್ನು ಲಾಟರಿ, ಚೀಟಿ ಎತ್ತುವ ಮೂಲಕ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಾಗಿ ವಿಂಗಡಿಸುವುದು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೇ ಚರ್ಚಿಸಿ ತಮ್ಮ ನಾಯಕರನ್ನು (ಸಿಎಂ, ವಿರೋಧ ಪಕ್ಷದ ನಾಯಕ ಇತ್ಯಾದಿ) ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ಕಲಾಪದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯ ವಿಷಯ ಮಂಡನೆ, ಹಾವಭಾವ ಹಾಗೂ ಸಕ್ರಿಯತೆಯನ್ನು ಗಮನಿಸಿ ಅಂಕ ನೀಡಲು ತಜ್ಞ ಉಪನ್ಯಾಸಕರು ಮತ್ತು ಸಮಿತಿ ಸದಸ್ಯರನ್ನೊಳಗೊಂಡ ವಿಶೇಷ ಮೌಲ್ಯಮಾಪನ ತಂಡವನ್ನು ರಚಿಸಲಾಗುತ್ತದೆ ಎಂದರು.

ಅಂತಿಮ ಕಾರ್ಯಕ್ರಮಕ್ಕೂ ಮುನ್ನ ಓರಿಯಂಟೇಶನ್ ತರಬೇತಿ ಮತ್ತು ಅಭ್ಯಾಸ ಕಲಾಪಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ನೀತಿ ಹಾಗೂ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸಲು ವಿವಾದಾತ್ಮಕವಲ್ಲದ ಪ್ರಚಲಿತ ವಿಷಯಗಳನ್ನು ಚರ್ಚೆಗೆ ನೀಡಲಾಗುತ್ತದೆ ಎಂದು ಸೂಚಿಸಿದರು.

ಜಿಪಂ ಸಿಇಒ ಮುಕುಲ್ ಜೈನ್ ಮಾತನಾಡಿ, ಯುವ ಸಂಸತ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. ನ್ಯಾಯವಾದಿ ಗುರುರಾಜ ಮಾತನಾಡಿದರು.

ತರಬೇತಿ ಮತ್ತು ವಿಷಯಗಳು ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸಂಸದೀಯ ನಡಾವಳಿ ಹಾಗೂ ಜೀರೋ ಅವರ್ ಕುರಿತು ತರಬೇತಿ ನೀಡಲಾಗುವುದು. ರಿಹರ್ಸಲ್ ಮತ್ತು ಅಂತಿಮ ದಿನದ ಕಲಾಪಕ್ಕೆ ಬೇರೆ ಬೇರೆ ಪ್ರಚಲಿತ ವಿಷಯಗಳನ್ನು (ಉದಾ: ಪರಿಸರ ಸಂರಕ್ಷಣೆ, ಡಿಜಿಟಲ್ ಗೌಪ್ಯತೆ/ಸೈಬರ್ ಭದ್ರತೆ, ಅಭಿವೃದ್ಧಿ ಯೋಜನೆಗಳು, ಕೃತಕ ಬುದ್ದಿಮತ್ತೆ ಇತ್ಯಾದಿ) ಚರ್ಚೆಗೆ ನಿಗದಿಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ, ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾಸನಾಯಕ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.