ಬಳ್ಳಾರಿ: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸಮಾಜಸೇವೆ ಮೈಗೂಡಿಸಿಕೊಳ್ಳಬೇಕು. ಇದರಿಂದ ಅವರು ಜ್ಞಾನಿಗಳಾಗಿಯೂ, ಮಾನವೀಯತೆಯುಳ್ಳವರಾಗಿಯೂ ರೂಪುಗೊಳ್ಳುತ್ತಾರೆ ಎಂದು ತಾಲೂಕಿನ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯರು ಹಾಗೂ ಸಮಾಜಮುಖಿ ಚಿಂತಕಿ ಡಾ.ಬಿ.ಜಿ. ಕಲಾವತಿ ತಿಳಿಸಿದರು.
ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಏಳು ದಿನಗಳ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾನವನ ಜೀವನದಲ್ಲಿ ಜ್ಞಾನಕ್ಕೆ ಇರುವ ಮಹತ್ವ ಸಮಾಜಮುಖಿ ಹೊಣೆಗಾರಿಕೆಗೂ ಅಷ್ಟೇ ಮಹತ್ವವಿದೆ. ವಿದ್ಯಾರ್ಥಿಗಳು ಕೇವಲ ಪಾಠ ಪುಸ್ತಕಗಳಲ್ಲೇ ಸೀಮಿತವಾಗದೇ ಸಮಾಜದ ಒಳಿತಿಗಾಗಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು. ಸಮಾಜಸೇವೆಯ ಗುಣವೆಂದರೆ ಇತರರ ನೋವನ್ನು ಮನಗಂಡು ಸಹಾಯ ಮಾಡಲು ಮುಂದಾಗುವುದು. ಇದು ಕೇವಲ ದಾನ ಧರ್ಮವಲ್ಲ; ಇದು ಮಾನವೀಯತೆಯ ಪ್ರತಿಬಿಂಬವಾಗಿದೆ. ವಿದ್ಯಾರ್ಥಿಗಳು ಬಾಲ್ಯದಲ್ಲೇ ಈ ಗುಣವನ್ನು ಮೈಗೂಡಿಸಿಕೊಂಡರೆ ಅವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದವರಾಗಿ ಬೆಳೆಯುತ್ತಾರೆ. ಯಾವುದೇ ಒಂದು ದೇಶ ಸಮರ್ಥ ಹಾಗೂ ಸೃಜನಶೀಲವಾಗಿ ಅಭಿವೃದ್ಧಿ ಹೊಂದಬೇಕಾದರೆ ವಿದ್ಯಾರ್ಥಿ- ಯುವ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಯುವಕರು ಸಮಾಜಸೇವಾ ಗುಣಗಳನ್ನು ಅಳವಡಿಸಿಕೊಂಡಲ್ಲಿ ದೇಶದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಸಹಕಾರಿಯಾಗಲಿದೆ ಎಂದು ಡಾ.ಬಿ.ಜಿ. ಕಲಾವತಿ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಅಧ್ಯಾಪಕ ಎಂ.ಸೋಮಶೇಖರ ಮಾತನಾಡಿ, ಆಧುನಿಕ ಜೀವನ ಶೈಲಿಯ ಭರಾಟೆಯಿಂದ ಮನುಷ್ಯನಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸಹಬಾಳ್ವೆ, ಸಾಮರಸ್ಯದ ಕೊರತೆಯಿಂದಾಗಿ ಇಂದು ಆಪ್ತ ಸಮಾಲೋಚನಾ ಕೇಂದ್ರಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದರು.
ಸಮಾಜಮುಖಿ ಚಿಂತನೆ, ಸಮನ್ವಯತೆಯಿಂದ ಸಾರ್ಥಕ ಜೀವನ ಸಾಧ್ಯ. ಬಹು ವೈವಿಧ್ಯತೆಯ ಈ ದೇಶದಲ್ಲಿ ಸಂಸ್ಕಾರ, ನಿಸ್ವಾರ್ಥ ಸೇವೆ, ಪರರಿಗೆ ಮಿಡಿಯುವ ಮಾನವೀಯ ಸಂವೇದನೆ ಹಾಗೂ ದೇಶ ಪ್ರೇಮದ ಗುಣಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಮೈಗೂಡಿಸಿಕೊಳ್ಳುವುದು ಸಾರ್ಥಕತೆಯ ಬದುಕಿನತ್ತ ಸಾಗುವ ಗುಣಲಕ್ಷಣವೂ ಆಗಿದೆ ಎಂದು ತಿಳಿಸಿದರು.ಶಿಬಿರಾಧಿಕಾರಿ ಹಾಗೂ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮಾಟೂರು ಬಸವರಾಜ್ ಶಿಬಿರದ ಉದ್ದೇಶ ಹಾಗೂ ಏಳುದಿನದ ಕಾರ್ಯಕ್ರಮ ಕುರಿತು ವಿವರಿಸಿದರು. ಗ್ರಾಮದ ಮುಖಂಡರಾದ ಕುಮಾರ ಗೌಡ, ಕೆ.ರಾಮಾಂಜನಿ, ಬಿ.ಮಹೇಶ್ ಹಾಗೂ ಉಪನ್ಯಾಸಕರಾದ ಅಮಲ್, ಪೀರ್ ಜಾದೆ ಅಸ್ಲಾಂ, ಪ್ರವೀಣ್ ಎ.ಎಂ.ಪಿ, ಶರಣಪ್ಪ, ದೈಹಿಕ ನಿರ್ದೇಶಕ ಮಂಜುನಾಥ ಕಡೆಕೊಪ್ಪ ಅವರು ಉಪಸ್ಥಿತರಿದ್ದರು.
ಶೇಖಮ್ಮ, ಕುಮಾರಿ ದೇವಿ ಹಾಗೂ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ ಜರುಗಿತು.