ಸಂಸ್ಕಾರ ರಹಿತ ಶಿಕ್ಷಣದಿಂದಲೇ ಇಂದು ವಿದ್ಯಾವಂತರು ಭ್ರಷ್ಟರು, ಸಮಾಜಘಾತಕರು ಮತ್ತು ದೇಶದ್ರೋಹಿಗಳಾಗುತ್ತಿದ್ದಾರೆ. ವಿದ್ಯಾವಂತರು ವಿನಯ ಶೀಲರಾಗಬೇಕು. ನಮ್ಮ ಜನಪದರು ಹೇಳುವಂತೆ ಆಚಾರದಲ್ಲಿ ಅರಸರಾಗಬೇಕು. ಕಲಿಕಾಶ್ರದ್ಧೆ ಮತ್ತು ಉನ್ನತ ಗುರಿಯಿಂದ ಸಾಧಕರಾಗಬೇಕು.
ಕನ್ನಡಪ್ರಭ ವಾರ್ಚೆ ಕೆ.ಆರ್.ಪೇಟೆ
ಕಲಿಕೆ ಹಂತದಲ್ಲಿಯೇ ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆ ಮೈಗೂಡಿಸಿಕೊಳ್ಳುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಕರೆ ನೀಡಿದರು.ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಕೋಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರ ಇಂದು ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣ ಖಾಸಗೀಕರಣದ ಫಲವಾಗಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಕೊರತೆ ಎದುರಾಗಿದೆ. ಅಂಕ ಅಧಾರಿತ ಶಿಕ್ಷಣ ಮುನ್ನೆಲೆಗೆ ಬಂದಿದ್ದು, ಕಲಿತವರಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಂಸ್ಕಾರ ರಹಿತ ಶಿಕ್ಷಣದಿಂದಲೇ ಇಂದು ವಿದ್ಯಾವಂತರು ಭ್ರಷ್ಟರು, ಸಮಾಜಘಾತಕರು ಮತ್ತು ದೇಶದ್ರೋಹಿಗಳಾಗುತ್ತಿದ್ದಾರೆ. ವಿದ್ಯಾವಂತರು ವಿನಯ ಶೀಲರಾಗಬೇಕು. ನಮ್ಮ ಜನಪದರು ಹೇಳುವಂತೆ ಆಚಾರದಲ್ಲಿ ಅರಸರಾಗಬೇಕು. ಕಲಿಕಾಶ್ರದ್ಧೆ ಮತ್ತು ಉನ್ನತ ಗುರಿಯಿಂದ ಸಾಧಕರಾಗಬೇಕೆಂದರು.
ಸಾರ್ವಜನಿಕ ಆಸ್ಪತ್ರೆ ವೈದ್ಯೆ ಡಾ.ದಿವ್ಯಾ ಅವರು, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ಗ್ರಾಮೀಣ ಪ್ರದೇಶದ ಬಹುತೇಕ ಹೆಣ್ಣುಮಕ್ಕಳು ರಕ್ತ ಹೀನತೆ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಕಲಿಕೆಗೆ ನೀಡುವಷ್ಟೇ ಆದ್ಯತೆಯನ್ನು ಆರೋಗ್ಯ ಸಂರಕ್ಷಣೆ ಕಡೆಗೂ ನಿಡಬೇಕು. ಒತ್ತಡ ಮುಕ್ತವಾದ ಕಲಿಕೆ ಇರಬೇಕೆಂದರು.ಕಾಲೇಜಿನ ಸಾಂಸ್ಕೃತಿಕ ಸಂಯೋಜಕಿ ಪ್ರೊ.ಕೆ.ಪಿ.ಪ್ರತಿಮಾ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ತಡೆಗೆ ಕಾಲೇಜು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಕಾಲೇಜಿನ ಒಳಗೆ ಮತ್ತು ಹೊರಗೆ ಹೆಣ್ಣು ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅದಕ್ಕೆ ನಮ್ಮ ಸಮಿತಿ ಸ್ಪಂದಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಎಸ್.ಕೆಂಡಗಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ವಿಭಾಗದ ಮಹದೇವಸ್ವಾಮಿ, ಐಕ್ಯೂಎಸಿ ಕೋಶದ ಸಂಯೋಜಕ ಡಾ.ಜಿ.ಮಧು, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ವಿನಯಕುಮಾರ್, ನಿರ್ವಹಣಾ ಶಾಸ್ತ್ರ ಮುಖ್ಯಸ್ಥ ಕಿರಣ್, ಸ್ಕಾಲರ್ಶಿಪ್ ಸಂಚಾಲಕ ಕೆ.ಎನ್.ಆದರ್ಶ, ಎನ್.ಎಸ್.ಎಸ್ ಘಟಕದ ಸಂಚಾಲಕ ಶಿವಸ್ವಾಮಿ, ಚಂದ್ರು, ಆನಂದ ಇದ್ದರು.