ಸಾರಾಂಶ
ವಿದ್ಯಾರ್ಥಿಗಳು ತಂಬಾಕು, ಗುಟಕಾ, ಬೀಡಿ, ಸಿಗರೇಟ್ ಚಟಗಳಿಗೆ ಅಂಟಿಕೊಳ್ಳದಂತೆ ಅವರನ್ನು ಜಾಗೃತಗೊಳಿಸುವ ಜವಾಬ್ದಾರಿ ಸಮಾಜದ ಹಿರಿಯರ ಮೇಲಿದೆ ಎಂದು ವೈದ್ಯ ಡಾ.ಮೋಹನ ಬಿರಾದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ವಿದ್ಯಾರ್ಥಿಗಳು ತಂಬಾಕು, ಗುಟಕಾ, ಬೀಡಿ, ಸಿಗರೇಟ್ ಚಟಗಳಿಗೆ ಅಂಟಿಕೊಳ್ಳದಂತೆ ಅವರನ್ನು ಜಾಗೃತಗೊಳಿಸುವ ಜವಾಬ್ದಾರಿ ಸಮಾಜದ ಹಿರಿಯರ ಮೇಲಿದೆ ಎಂದು ವೈದ್ಯ ಡಾ.ಮೋಹನ ಬಿರಾದಾರ ಹೇಳಿದರು.ಸ್ಥಳೀಯ ಆರ್‌ಎಂಜಿ ಪದವಿ ಪೂರ್ವ ಕಾಲೇಜು ಮತ್ತು ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರೌಢಾವಸ್ಥೆಯಲ್ಲಿ ಹಾರ್ಮೋನ್‌ಗಳು ಒತ್ತಡಕ್ಕೆ ಒಳಗಾಗಿ ಹತ್ತು ಹಲವು ಚಟಗಳಿಗೆ ಪ್ರಭಾವಿತರಾಗುವುದು ಸಹಜ. ಮನೆಯಲ್ಲಿ ಪಾಲಕರು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಆಚಾರ-ವಿಚಾರ, ಹವ್ಯಾಸಗಳನ್ನು ಗಮನಿಸುವ ಮೂಲಕ ಮಾರ್ಗದರ್ಶನ ನೀಡಬೇಕು. ತಂಬಾಕು ಸೇವನೆಯಿಂದಾಗಿ ಲಕ್ಷಾಂತರ ಜನರು ಹಲವಾರು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ತಿಳಿಸಿ ಎಚ್ಚರಿಸುವ ಹೊಣೆಗಾರಿಕೆ ಹಿಂದಿಗಿಂತಲೂ ಇಂದು ಸಮರೋಪಾದಿಯಾಗಿ ನಡೆಯಬೇಕಿದೆ ಎಂದು ಎಚ್ಚರಿಸಿದರು.ಪ್ರಾಚಾರ್ಯ ಬಸವರಾಜ ಎ.ಗಂಜಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ಉತ್ಪನ್ನಗಳಲ್ಲಿರುವ ನಿಕೋಟಿನ್ ವಿಷಕಾರಿಯಾಗಿದ್ದು, ಅದು ದೇಹದೊಳಗೆ ಸೇರಿದರೆ ಸಾವು ಖಚಿತವೆಂಬ ಜಾಗೃತಿ ಕಾರ್ಯಕ್ಕೆ ಕೈಜೋಡಿಸೋಣ ಎಂದರು.
ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ತಾಲೂಕು ಯೋಜನಾಧಿಕಾರಿ ರಾಜು.ಎಸ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ವೆಂಕಪ್ಪ ಮುಳ್ಳೂರು, ಜಿಲ್ಲಾ ಸದಸ್ಯ ಶ್ರೀಶೈಲಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕನ್ನಡ ಹಿರಿಯ ಉಪನ್ಯಾಸಕ ಡಾ.ನಾಗರಾಜ ನಾಡಗೌಡರ ಪರಿಚಯಿಸಿ, ಸ್ವಾಗತಿಸಿದರು. ಉಪನ್ಯಾಸಕ ಎಂ.ಆರ್.ಬಸವನಾಳ ನಿರೂಪಿಸಿದರು. ಧರ್ಮಸ್ಥಳ ಟ್ರಸ್ಟಿ ಪ್ರವೀಣ ವಂದಿಸಿದರು. ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.