ನರಸಿಂಹರಾಜಪುರವಿದ್ಯಾರ್ಥಿಗಳು ಸಮಾಜದಲ್ಲಿ ಸಾಧಕರಾಗಬೇಕೆ ಹೊರತು ಮಾರಕವಾಗಬಾರದು ಎಂದು ಶಿವಮೊಗ್ಗ ಮಾನಸಿಕ ತಜ್ಞ ವೈದ್ಯ ಡಾ.ಎಸ್.ಟಿ.ಅರವಿಂದ್ ಕರೆ ನೀಡಿದರು.

: ಡಾ.ಅರವಿಂದ ಎಸ್.ಟಿ. ಕರೆ । ಮಾದಕ ವಸ್ತುಗಳ ಬಗ್ಗೆ ಜಾಗೃತಿ- ವ್ಯಸನ ಮುಕ್ತ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ವಿದ್ಯಾರ್ಥಿಗಳು ಸಮಾಜದಲ್ಲಿ ಸಾಧಕರಾಗಬೇಕೆ ಹೊರತು ಮಾರಕವಾಗಬಾರದು ಎಂದು ಶಿವಮೊಗ್ಗ ಮಾನಸಿಕ ತಜ್ಞ ವೈದ್ಯ ಡಾ.ಎಸ್.ಟಿ.ಅರವಿಂದ್ ಕರೆ ನೀಡಿದರು.

ಶನಿವಾರ ಪಟ್ಟಣದ ಎಂಕೆಸಿಪಿಎಂ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ವ್ಯಸನ ಮುಕ್ತ ಕಾರ್ಯಾಗಾರದಲ್ಲಿ ಮಾತನಾಡಿದರು. ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯ. ತಂದೆ, ತಾಯಿ ಹಾಗೂ ಪೋಷಕರು ಸಮಾಜದಲ್ಲಿ ಆದರ್ಶವಾಗಿ, ಮಾರ್ಗದರ್ಶಕ ರಾಗಿ ಬಾಳಬೇಕು. ಪೋಷಕರ ತಪ್ಪು ಮಾಡಿದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಮಾನಸಿಕ ಖಿನ್ನತೆಯಿಂದ ಪ್ರಪಂಚದಲ್ಲಿ ವರ್ಷಕ್ಕೆ 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತ ದೇಶದಲ್ಲಿ 1.50 ಲಕ್ಷ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದರೆ ಮಾನಸಿಕ ಖಿನ್ನತೆ. ಮಾನಸಿಕ ಒತ್ತಡಕ್ಕೆ ಒಳಗಾದವರು ಚಿಕ್ಕ, ಚಿಕ್ಕ ವಿಷಯ ನಕಾರಾತ್ಮಕವಾಗಿ ತೆಗೆದುಕೊಂಡು ಚಿಂತೆಗೆ ಒಳ ಗಾಗುತ್ತಾರೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತುಗಳ ಸೇವನೆ ದಿನೇ,ದಿನೇ ಹೆಚ್ಚಾಗುತ್ತಿದೆ. ಇತ್ತೀಚಿನ ಆರೋಗ್ಯ ಇಲಾಖೆ ಸರ್ವೆ ಪ್ರಕಾರ ಭಾರತ ದೇಶದಲ್ಲಿ 6 ಕೋಟಿ ಜನ ಮದ್ಯ ವ್ಯಸನಿಗಳಾಗಿದ್ದಾರೆ. 3 ಕೋಟಿ ಜನ ಗಾಂಜಾ ಚಟಕ್ಕೆ ಬಿದ್ದಿದ್ದಾರೆ. 1.50 ಕೋಟಿ ಜನ ಮಾತ್ರೆಗಳ ಚಟಕ್ಕೆ ಬಿದ್ದಿದ್ದಾರೆ. ಗುಟ್ಕಾ ಸೇವನೆ ಅಪಾಯಕಾರಿಯಾಗಿದ್ದು ಗುಟ್ಕಾ ಬ್ಯಾನ್‌ಗೆ ಸರ್ಕಾರಿ ಆದೇಶಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಮೊಬೈಲ್ ಗಳು ವಿದ್ಯಾರ್ಥಿಗಳ ಮೊದಲ ಮಾದಕ ವಸ್ತು. ವಿದ್ಯಾರ್ಥಿಗಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು. ಜೀವನದಲ್ಲಿ ಆದರ್ಶ ವ್ಯಕ್ತಿಗಳ ತತ್ವ ಗುರಿಯಾಗಿಟ್ಟುಕೊಂಡು ಸಾಧಕರಾಗಬೇಕು ಎಂದರು.

ಅತಿಥಿಯಾಗಿದ್ದ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ ವ್ಯಸನಿಗಳಾದವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅಂತಹ ವ್ಯಕ್ತಿಗಳನ್ನು ಕುಟುಂಬದವರು ಸಹ ನಿರ್ಲಕ್ಷ್ಯದಿಂದ ನೋಡುತ್ತಾರೆ. ಮಾದಕ ವಸ್ತುಗಳ ಚಟಕ್ಕೆ ಬಿದ್ದವರ ಜೀವನ ಸರ್ವ ನಾಶವಾಗುತ್ತದೆ. ಜ್ಞಾನಕ್ಕಾಗಿ ಹಿತಮಿತವಾಗಿ ಮೊಬೈಲ್ ಬಳಕೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಕರೆ ನೀಡಿದರು.

ಅತಿಥಿಗಳಾಗಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ರೋಟರಿ ಕ್ಲಬ್ ವಲಯ 6 ರ ಜೋನಲ್ ಲೆಫ್ಟಿನೆಂಟ್ ಬಿ.ಎಸ್.ದಿನೇಶ್, ಒಕ್ಕಲಿಗರ ಸಂಘದ ಖಜಾಂಚಿ ಎಸ್.ಎನ್.ಲೋಕೇಶ್, ರೋಟರಿ ಕ್ಲಬ್ ಕಾರ್ಯದರ್ಶಿ ಕೆ.ಪಿ.ಮನೋಜ್ ಕುಮಾರ್, ಪ್ರಾಂಶುಪಾಲೆ ಪದ್ಮ ರಮೇಶ್ ಇದ್ದರು.

ಇದೇ ಸಂದರ್ಭದಲ್ಲಿ ಮಾನಸಿಕ ತಜ್ಞ ವೈದ್ಯ ಡಾ. ಅರವಿಂದ್ ಎಸ್.ಟಿ. ಅವರನ್ನು ಅಭಿನಂದಿಸಲಾಯಿತು. ಮಧುರ ಮಂಜುನಾಥ್ ಸ್ವಾಗತಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.ಜ್ಞಾನೇಶ್ ವಂದಿಸಿದರು.