ಸಾರಾಂಶ
ಚನ್ನಪಟ್ಟಣ: ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗಿ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸಲಹೆ ನೀಡಿದರು.
ನಗರದ ಚರ್ಚ್ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಸರಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳೊಂದಿಗೆ ಮಾದಕ ದ್ರವ್ಯಗಳ ಬಳಕೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಮಾದಕ ವಸ್ತಗಳ ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಾದಕ ವಸ್ತುಗಳು ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಹಿರಿಯರು, ಕಿರಿಯರು ಎನ್ನದೇ ಎಲ್ಲ ವಯೋಮಾನದವರು ಇದರ ಚಟಕ್ಕೆ ದಾಸರಾಗುತ್ತಿದ್ದಾರೆ. ಆಕರ್ಷಣೆಗಾಗಿ ಕಲಿತ ಚಟ ಅಭ್ಯಾಸವಾಗಿ ಎಷ್ಟೋ ಜನರನ್ನು ಬಲಿಪಡೆದುಕೊಳ್ಳುತ್ತಿದೆ. ಒಮ್ಮೆ ನೀವು ಮಾದಕ ವಸ್ತುಗಳ ದಾಸ್ಯಕ್ಕೆ ಒಳಗಾದರೆ ಅದರಿಂದ ಹೊರಬರುವುದು ಸುಲಭವಲ್ಲ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಆದಷ್ಟು ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಾಗಲಿ, ಸಾರ್ವಜನಿಕರಾಗಲಿ ಬೇಕೆಂದು ಈ ದುಶ್ಚಟಗಳನ್ನು ಅಂಟಿಸಿಕೊಳ್ಳುವುದಿಲ್ಲ. ಆಕರ್ಷಣೆ, ಮಾನಸಿಕ ಒತ್ತಡ ಮತ್ತಿತರ ಕಾರಣಕ್ಕೆ ಯಾವುದೋ ಮಾದಕ ವಸ್ತುವಿನ ಚಟವನ್ನು ಅಂಟಿಸಿಕೊಳ್ಳುತ್ತಾರೆ. ಆದರೆ, ಕ್ರಮೀಣ ಅದಕ್ಕೆ ದಾಸರಾಗಿ ತಮ್ಮ ಹಾಗೂ ಕುಟುಂಬದ ಜೀವನವನ್ನು ಹಾಳು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವ ಜತೆಗೆ ಮಾದಕ ವಸ್ತುಗಳ ಚಟಕ್ಕೆ ಅಂಟಿಕೊಂಡಿರುವ ಇತರರಿಗೆ ಅವುಗಳ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಮಾದಕ ದ್ರವ್ಯಗಳ ಬಳಕೆಯಷ್ಟೇ ಅವುಗಳ ಬಗ್ಗೆ ಉದಾಸೀನತೆ ತೋರುವುದು ಅಪಾಯಕಾರಿಯಾಗಿದೆ. ನಮ್ಮಸುತ್ತಮುತ್ತಲ ಸಮಾಜದಲ್ಲಿ ಇವುಗಳ ಬಳಕೆಯಾಗುತ್ತಿದ್ದರೆ, ನಮ್ಮ ಸ್ನೇಹಿತರಾಗಲಿ, ಮನೆಯ ಅಕ್ಕಪಕ್ಕದವರಾಗಲಿ ಇವುಗಳ ಸೆಳೆತಕ್ಕೆ ಸಿಲುಕಿದ್ದರೆ, ಅಂತಹವರ ಬಗ್ಗೆ ನಮಗೆ ಮಾಹಿತಿ ನೀಡುವ ಮೂಲಕ ಮಾದಕ ದ್ರವ್ಯಗಳ ಬಳಕೆ ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಲಕ್ಷ್ಮಿನಾರಾಯಣ್, ಗ್ರಾಮಾಂತರ ವೃತ ನಿರೀಕ್ಷಕ ಟಿ.ಟಿ.ಕೃಷ್ಣ ,ನಗರ ವೃತ್ತ ನಿರೀಕ್ಷಕಿ ಶೋಭಾ, ಪುರ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್, ಗ್ರಾಮಾಂತರ ಠಾಣೆ ಪಿಎಸ್‌ಐ ಲಿಯಾಕತ್,ಸಂಚಾರಿ ಠಾಣೆ ಪಿಎಸ್‌ಐ ಶುಭಾಂಬಿಕಾ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.ಟೋ೧೧ಸಿಪಿಟಿ4:
ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತಗಳ ಕುರಿತು ಜನಜಾಗೃತಿ ಅಭಿಯಾನಕ್ಕೆ ಎಸ್‌ಪಿ ಕಾರ್ತಿಕ್ ರೆಡ್ಡಿ ಚಾಲನೆ ನೀಡಿದರು.