ಸಾರಾಂಶ
ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಪೂರ್ವ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಜೀವಾಳ. ತಾವು ಕಲಿತ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಚುನಾವಣೆಗಳು ಸಹಕಾರಿ. ಕಾಲೇಜು ಚುನಾವಣೆಗಳು ಕೇವಲ ಶೈಕ್ಷಣಿಕ ಚಟುವಟಿಕೆಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೇ ನಮ್ಮ ಸುತ್ತ ಇರುವ ಜನರ ಜೊತೆ ಒಡನಾಟ ಇಟ್ಟುಕೊಳ್ಳಬೇಕು. ಜನರ ಜೊತೆ ಬೆರೆಯುವ ಗುಣ ಬೆಳೆಸಿಕೊಳ್ಳಿ. ಶಿಕ್ಷಣವನ್ನು ಪಡೆದರೆ ನಿಮಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂದರು.ಸವಾಲುಗಳಿಗೆ ಎದೆಕೊಟ್ಟು ಎದುರಿಸುವ ಗುಣವನ್ನು ಬೆಳೆಸಿಕೊಳ್ಳಿ. ಸವಾಲುಗಳಿಗೆ ಧೃತಿಗೆಟ್ಟರೆ ನಾವು ಪ್ರಸಿದ್ದಿಗೆ ಬರಲು ಸಾಧ್ಯವಿಲ್ಲ . ಸಮಾಜದ ಎಲ್ಲ ಮಜಲುಗಳಲ್ಲಿ ಗುರ್ತಿಸಿಕೊಳ್ಳುವಂತೆ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ದಿಮೆದಾರ ಪ್ರಕಾಶ್ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಜೀವನ ಪಾಠವನ್ನು ಕಲಿಯಬೇಕು. ಕೇವಲ ಪುಸ್ತಕಗಳನ್ನು ಅಭ್ಯಸಿಸುವ ಸ್ವಂತಿಕೆ ಬೆಳೆಸಿಕೊಳ್ಳಬೇಕು. ಪದವಿಗಾಗಿ ನಾವು ಅಭ್ಯಾಸ ಮಾಡಬಾರದು. ಹೆಸರಿನ ಹಿಂದೆ ಬರುವ ಸರ್ಟಿಫಿಕೆಟ್ ಗಾಗಿ ಕಲಿಯುವಂತಾಗಿದೆ ಎಂದರು.ಲೀಡರ್‌ಶಿಪ್ ಬೆಳೆಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಿ. ಪ್ರಯತ್ನವೇ ಯಶಸ್ಸಿನ ಗುಟ್ಟು. ನೀವು ಪ್ರಯತ್ನವನ್ನು ಮುಂದುವರೆಸಿ ಯಶಸ್ಸು ಸಿಗಲಿದೆ ಎಂದು ಹಾರೈಸಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಲ್.ಹೆಬ್ಬಾರ್ ಮಾತನಾಡಿದರು.ಸಭಾಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ ಮಾತನಾಡಿ, ವ್ಯಕ್ತಿತ್ವ ವಿಕಸನ ಆಗಬೇಕು ಎಂದಾದರೆ ನಮ್ಮಲ್ಲಿ ವರ್ತನೆಯ ಬದಲಾವಣೆ ಅಗತ್ಯ. ಕಾಲೇಜಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವಂತಾಗಬೇಕು ಎಂದರು.
ಎಂಪಿಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕ ನಿಜಲಿಂಗಪ್ಪ. ಎಚ್ ಪ್ರತಿಜ್ಞಾವಿಧಿ ಬೋಧಿಸಿದರು.ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಪ್ರಿನ್ಸ್ ಅಂತೋನ್ ರೋಡ್ರಗೀಸ್ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರ ಐ.ಎ.ಶೇಖ್ ಇದ್ದರು.