ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಅಲ್ಪತೃಪ್ತಿಗಳಾಗದೆ ಉನ್ನತ ಗುರಿ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಪ್ರಸನ್ನಕುಮಾರ್ ಕರೆ ನೀಡಿದರು. ಪಟ್ಟಣದ ಶ್ರೀಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪಿಯುಸಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ. ಓದುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಅಲ್ಲಿಂದಿಲ್ಲಿ ಹರಿಯಬಿಟ್ಟು ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳದೆ ಕಷ್ಟಪಟ್ಟು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿ ಸಾಧಿಸುವ ಸಂಕಲ್ಪ ಮಾಡಬೇಕು ಎಂದರು.

ವಿದ್ಯಾರ್ಥಿ ಜೀವನವು ಚಿನ್ನದ ಜೀವನ. ಓದಿನ ಸಮಯದಲ್ಲಿ ಮೊಬೈಲ್ ಫೋನಿನ ವ್ಯಾಮೋಹಕ್ಕೆ ಒಳಗಾಗಿ ಫೇಸ್ ಬುಕ್, ವ್ಯಾಟ್ಸಾಪ್, ಮೊಬೈಲ್ ಗೇಮ್ ಗಳಲ್ಲಿ ತೊಡಗಿದರೆ ಜೀವನ ಪರ್ಯಂತ ವ್ಯಥೆ ಪಡಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಮುಂದಿನ ಉನ್ನತ ಬದುಕಿನ ಕಡೆಗೆ ಆಲೋಚನೆ ಮಾಡಿ ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಸಾಧನೆ ಮಾಡಬೇಕು ಎಂದರು.

ಕಾಲೇಜು ಹಿರಿಯ ವಿದ್ಯಾರ್ಥಿ ಬೆಂಗಳೂರಿನ ಉದ್ಯಮಿ ತಾಲೂಕಿನ ಹಾದನೂರು ಗ್ರಾಮದ ರಾಮಚಂದ್ರ ಮಾತನಾಡಿ, ಕಾಲೇಜು ಪಟ್ಟಣದಲ್ಲಿ ಆರಂಭವಾಗಿ 38 ವರ್ಷ ಕಳೆಯುತ್ತಿವೆ. ನಾನು 25 ವರ್ಷಗಳ ಹಿಂದೆ ಇದೇ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿ ಮಂಡ್ಯ ಜಿಲ್ಲೆಗೆ ಮೊದಲ ಸ್ಥಾನ ಪಡೆದು ಉತ್ತೀರ್ಣನಾಗಿದ್ದೇನೆ. ನಾನು ಗುರುಗಳ ಮಾತಿನಂತೆ ಕಷ್ಟಪಟ್ಟು ವ್ಯಾಸಂಗ ಮಾಡಿದ್ದರಿಂದ ಇಂದು ಉದ್ಯಮಿಯಾಗಿ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ್, ನಿವೃತ್ತ ಸಹ ಪ್ರಾಧ್ಯಾಪಕ ಪಿ.ಕೆ.ಜವರೇಗೌಡ, ಸಾರಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಎ.ಆರ್.ನಾಗೇಶ್, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಂಡಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರೇಮಕುಮಾರ್, ಗುಬ್ಬಿ ತಾಲೂಕಿನ ಅಗ್ನಿ ವಂಶ ಕ್ಷತ್ರಿಯ ಸಮಾಜದ ಜಂಟಿ ಕಾರ್ಯದರ್ಶಿ ಜಿ.ಬಿ.ನಾಗರಾಜು ಮಾತನಾಡಿದರು.

ಶ್ರೀಬಂಡಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಮಯ್ಯ ಉಂಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಗುಲಾಬಿ ಹೂ ಮತ್ತು ಲೇಖನಿ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.