ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯಾರ್ಥಿಗಳು ವ್ಯರ್ಥ ಕಾಲಹರಣ ಮಾಡದೆ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ಬಂಡಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗುಬ್ಬಿ ಡಾ.ಜಿ.ಬಿ.ಮಲ್ಲಪ್ಪ ಕರೆ ನೀಡಿದರು.ಪಟ್ಟಣದ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಶಿಕ್ಷಕರ ದಿನಾಚರಣೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಗೇಮ್, ಫೇಸ್ ಬುಕ್, ವ್ಯಾಟ್ಸಾಪ್ ಎಂದು ತಮ್ಮ ಅಮೂಲ್ಯ ಸಮಯ ವ್ಯರ್ಥವಾಗಿ ಕಳೆಯದೆ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ನಿಯಮಿತವಾಗಿ ಓದಿ ಜ್ಞಾನಾರ್ಜನೆ ಮಾಡಿಕೊಂಡು ಸಾಧನೆ ಮಾಡುವ ಕಡೆ ದೃಢವಾದ ಮನಸ್ಸು ಮಾಡಬೇಕು ಎಂದರು.ವಿದ್ಯಾರ್ಥಿಗಳು 15 ರಿಂದ 25ನೇವಯಸ್ಸಿನೊಳಗೆ ಕನಿಷ್ಠ 6 ಗಂಟೆಗಳ ಕಾಲ ಪ್ರತಿನಿತ್ಯವೂ ಅಭ್ಯಾಸ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡರೆ ತಮ್ಮ ಜೀವನದುದ್ದಕ್ಕೂ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದರು.ಪಟ್ಟಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಸುಮಾರಾಣಿ ಮಾತನಾಡಿ, ವಿದ್ಯೆ ಸಾಧಕರ ಸ್ವತ್ತೆ ಹೊರತು ಸೋಮಾರಿಗಳ ಸ್ವತ್ತಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವ ಜನರು ಕಷ್ಟುಪಟ್ಟು ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಬೇಕು ಎಂದರು.
ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಮಳವಳ್ಳಿ ಡಾ.ಶಿವಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಪ್ರತಿಮ ಸಾಧಕರಾಗಿದ್ದಾರೆ. ತಮ್ಮಲ್ಲಿನ ಕೀಳರಿಮೆ ಅಳಿಸಿಹಾಕಿ ಆತ್ಮವಿಶ್ವಾಸದಿಂದ ಮುನ್ನಡೆದು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಮಹಾನ್ ವ್ಯಕ್ತಿಗಳಾಗಿ ರೂಪು ಗೊಳ್ಳಬಹುದು ಎಂದರು.ಕಾರ್ಯಕ್ರಮದಲ್ಲಿ ಬಂಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಯ್ಯ ಉಂಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕ ನಾಗರಂಗಪ್ಪ, ಪುರಸಭೆ ಮಾಜಿ ಸದಸ್ಯರಾದ ಕೆ.ಬಿ.ನಂದೀಶ್, ಕೆ.ಆರ್.ನೀಲಕಂಠ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್, ಸಮಾಜ ಸೇವಕರಾದ ಬಸವೇಗೌಡ, ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ಆಡಳಿತಾಧಿಕಾರಿ ಎಸ್.ಬಿ.ಲೋಕೇಶ್, ಮಡುವಿನಕೋಡಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಿ.ಲಿಂಗರಾಜು, ಪಿಡಿಜಿ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವೈ.ಈ.ಮಂಜುನಾಥ್ ಇದ್ದರು.