ಸಾರಾಂಶ
- ಸರ್ಕಾರಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್, ರೇಂಜರ್ಸ್ ಘಟಕ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬುದು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್, ರೇಂಜರ್ಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.ಸದೃಢ ಮನಸ್ಸು ಆರೋಗ್ಯ ಪೂರ್ಣ ದೇಹಕ್ಕೆ ಕ್ರೀಡೆ ಸಹಕಾರಿಯಾದರೆ ಕ್ರೀಯಾಶೀಲರಾಗಲು ಸಾಂಸ್ಕೃತಿಕ ಚಟುವಟಿಕೆ ಬಹಳ ಮುಖ್ಯ, ಈ ಎರಡರಲ್ಲೂ ವಿದ್ಯಾರ್ಥಿಗಳು ಭಾಗವಹಿಸಿದಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಹೇಳಿದರು.ಸುಮಾರು ₹3 ಕೋಟಿ ವೆಚ್ಚದಲ್ಲಿ ನೂತನ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಮೂಲಭೂತ ಸೌಕರ್ಯಗಳೊಂದಿಗೆ ಕಾಲೇಜನ್ನು ಉದ್ಘಾಟಿಸಿ ಸಮರ್ಪಿಸುವುದಾಗಿ ಭರವಸೆ ನೀಡಿದರು.12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಮಹಿಳೆಯರಿಗೆ ಸಮಾನತೆಯನ್ನು ತಂದುಕೊಟ್ಟರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆಂದು ಶ್ಲಾಘಿಸಿದರು.ಜಗಜ್ಯೋತಿ ಬಸವೇಶ್ವರರು ಸರ್ವರಿಗೂ ಸಮಬಾಳು, ಸಮಪಾಲು, ಶೋಷಿತರನ್ನು ಸಮಾಜದ ಮುನ್ನಲೆಗೆ ತರುವಲ್ಲಿ ಶ್ರಮಿಸಿದ ಫಲವಾಗಿ ಮತ್ತು 19ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಹೆಣ್ಣು ಮಕ್ಕಳಿಗೆ ಸಮಾನತೆ ಕಲ್ಪಿಸಿ ಮತದಾನದ ಹಕ್ಕು ನೀಡಿದ್ದಾರೆ. ಇಂದು ಜಿಲ್ಲಾ ಮಟ್ಟದಲ್ಲಿ ಶೇ.50 ರಷ್ಟು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳಿರುವುದನ್ನು ಮಾದರಿಯಾಗಿಟ್ಟುಕೊಂಡು ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸರ್ಕಾರ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೇಡ, ಉತ್ತಮ ಸಾಧನೆ ಮಾಡಿದ ಎಲ್ಲಾ ಮಹನೀಯರು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆಂಬುದನ್ನು ಮನಗಾಣಬೇಕು ಎಂದು ಹೇಳಿದರು.ಶಿಕ್ಷಣದಿಂದ ಮಾತ್ರ ಸರ್ವ ಸಮಸ್ಯೆಗಳನ್ನು ಸಮರ್ಥವಾಗಿ ನಿಯಂತ್ರಣ ಮಾಡಬಹುದು. ಈ ನಿಟ್ಟಿನಲ್ಲಿ ’ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬಂತೆ ನೀವೆಲ್ಲಾ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ನಾಡಿಗೆ ಹಾಗೂ ತಮ್ಮ ಕುಟುಂಬಕ್ಕೆ ಬೆಳಕಾಗಿರಿ ಎಂದು ಶುಭ ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರ ತರಲು ವೇದಿಕೆಗಳ ಅವಶ್ಯಕತೆ ಇದೆ. ಪುಸ್ತಕದಲ್ಲಿರುವುದನ್ನು ಕಲಿತು ಪರೀಕ್ಷೆ ಬರೆಯುವುದು ಶಿಕ್ಷಣವಲ್ಲ. ಕಲೆ, ಸಾಹಿತ್ಯ ಶಿಕ್ಷಣದ ಒಂದು ಭಾಗ ವಾಗಿದೆ. ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪುನಃ ಕ್ರೀಡೆ, ಕಲೆ, ಸಾಹಿತ್ಯವನ್ನು ಇದರ ಜೊತೆಗೆ ಕೌಶಲ್ಯವನ್ನು ಶಿಕ್ಷಣದ ಭಾಗವಾಗಿ ಮಾಡಲು ಯೋಜನೆ ರೂಪಿಸಿದ್ದಾರೆಂದರು.ಸಾಂಸ್ಕೃತಿಕ ಶ್ರೀಮಂತಿಕೆ ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಇನ್ನಷ್ಟು ಶ್ರೀಮಂತಗೊಳಿಸಲಿ ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಮೂಡಲಗಿರಿಯಯ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಉಪನ್ಯಾಸಕ ನಟೇಶ್ ಮಾತನಾಡಿದರು. ವೇದಿಕೆಯಲ್ಲಿ ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಶಾಸ್ತ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಮರ್, ಮಹೇಶ್ವರಪ್ಪ ಸಿ.ಇ, ದೀಕ್ಷಿತ್‌ಕುಮಾರ್, ದೇವರಾಜ್, ಶ್ರೀನಿವಾಸ್, ಲೋಕೇಗೌಡ, ಹೇಮ ಕುಮಾರಿ , ಪುಟ್ಟಸ್ವಾಮಿ ಉಪಸ್ಥಿತರಿದ್ದರು. 26 ಕೆಸಿಕೆಎಂ 1
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್, ರೇಂಜರ್ಸ್ ಘಟಕಗಳನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಪ್ರಾಂಶುಪಾಲರಾದ ಡಾ. ಮೂಡಲಗಿರಿಯಯ್ಯ, ನಟೇಶ್, ಸತೀಶ್ ಶಾಸ್ತ್ರಿ ಇದ್ದರು.