ಸಾರಾಂಶ
- ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪರಿಶ್ರಮ ವಹಿಸಿದಾಗ ಮಾತ್ರ ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾಯುಗದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವಿದ್ಯಾರ್ಥಿ ಜೀವನ ಸುವರ್ಣಾ ಕ್ಷರದಲ್ಲಿ ಬರೆದಿಡುವ ಸಮಯ ಇದಾಗಿದೆ ಎಂಬುದು ಮುಂದಿನ 10 ವರ್ಷಗಳಲ್ಲಿ ನಿಮಗೆ ತಿಳಿಯುತ್ತದೆ ಎಂದರು.ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಕೇಂದ್ರೀಕರಿಸಿ ವ್ಯಸನ, ದುರಭ್ಯಾಸದ ಕಡೆಗೆ ವಾಲದೆ, ಕೇವಲ ನಿಮ್ಮ ದೃಷ್ಟಿ ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದಾಗ ಉತ್ತಮ ಭವಿಷ್ಯವಾಗಿ ರೂಪು ಗೊಳ್ಳುತ್ತದೆ ಎಂದು ಹೇಳಿದರು.ಪ್ರಕೃತಿ ಮಡಿಲು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೇಶ, ರಾಜ್ಯದಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು, ಅಂಬಳೆ ಎ.ಆರ್ ಕೃಷ್ಣಶಾಸ್ತ್ರಿ ಇಂತಹ ಪ್ರಸಿದ್ಧ ಸಾಹಿತಿಗಳು ಜನಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಇದ್ದು, ಶಿಕ್ಷಣ ಪಡೆಯುತ್ತಿರುವ ನೀವುಗಳು ಸಹ ಮುಂದೆ ದೊಡ್ಡ ದೊಡ್ಡ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.ಹಿಂದೆ ಮಕ್ಕಳಿಗೆ ಗುರುಕುಲದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಹೊಳೆ, ನದಿ ದಂಡೆ ಮೇಲೆ, ಪರ್ವತಗಳ ಮೇಲೆ ಗುರುಕುಲಗಳು ಸುಂದರ ಪರಿಸರದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಇಂತಹ ಪ್ರಕೃತಿಗೆ ಹೆಸರು ವಾಸಿಯಾದ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವೇ ಧನ್ಯರು ಎಂದರು.ಮುಂದೆ ನೀವು ಸಂಸ್ಕಾರವಂತರಾಗಿ ಸಮಾಜಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ನಗರದ ಶಾಲಾ ಕಾಲೇಜುಗಳ ಸಮೀಪ ಮಾದಕ ದ್ರವ್ಯಗಳ ಮಾರಾಟಕ್ಕೆ ಕಡಿವಾಣ ಹಾಕುವ ಜೊತೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಸುಮಾರು ₹9 ಕೋಟಿ ವೆಚ್ಚದಲ್ಲಿ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಇನ್ನು2 ವರ್ಷಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಜೊತೆಗೆ ಎಲ್ಲಾ ಸೌಲಭ್ಯ ವನ್ನು ಕಲ್ಪಿಸಿ ದಿನದ 24 ಗಂಟೆಗಳಲ್ಲಿಯೂ ಕ್ರೀಡಾಪಟುಗಳಿಗೆ ಅರ್ಪಿಸುವ ಗುರಿ ಹೊಂದಲಾಗಿದೆ ಎಂದ ಅವರು, ಅನುದಾನ ಮಂಜೂರಾಗಿದ್ದು, ತಾಂತ್ರಿಕ ಅನುಮೋದನೆಗೆ ಕಾಯುತ್ತಿದ್ದೇವೆ ಎಂದರು.ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಮಂಜು ನಾಥ್ ಮಾತನಾಡಿ, ಮಳೆಗಾಲದಲ್ಲಿ ಕ್ರೀಡಾಕೂಟ ನಡೆದರೆ ವಿದ್ಯಾರ್ಥಿಗಳು ಭಾಗವಹಿಸಲು ತೊಂದರೆ ಯಾಗುತ್ತಿರುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಮಳೆಗಾಲ ಮುಗಿದ ಬಳಿಕ ಕ್ರೀಡಾಕೂಟ ಆಯೋಜನೆ ಮಾಡುವಂತೆ ಕಿವಿಮಾತು ಹೇಳಿದರು.ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಮಕ್ಕಳು ಕ್ರೀಡಾ ಸ್ಪರ್ಧೆಗೆ ತರಬೇತಿ ಪಡೆದು ಸಿದ್ಧರಾಗುವುದಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರೀಡಾಕೂಟ ಆಯೋಜಕರು ಗಮನಹರಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ. ಮಂಜುಳಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಂದ್ರ ಉಪಸ್ಥಿತರಿದ್ದರು. ಪ್ರಾಂಶುಪಾಲ ಎಸ್.ವಿ. ಮೇರುತುಂಗ ಸ್ವಾಗತಿಸಿ, ಉಪನ್ಯಾಸಕ ರಚನ್ ನಿರೂಪಿಸಿ, ರೀನಾ ವಂದಿಸಿದರು. 30 ಕೆಸಿಕೆಎಂ 1ಚಿಕ್ಕಮಗಳೂರಿನ ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಕೆ. ಮಂಜುಳಾ, ಸುರೇಂದ್ರ, ದೇವೇಂದ್ರ ಇದ್ದರು.