ಸಾರಾಂಶ
ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಕೋರ್ಸ್‌ನ ಪಠ್ಯಪುಸ್ತಕಗಳ ಕಿಟ್ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಉಪನ್ಯಾಸಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ/ಕುಶಾಲನಗರ
ಉತ್ತಮ ಉದ್ಯೋಗಾವಕಾಶ ಪಡೆಯುವ ನಿಟ್ಟಿನಲ್ಲಿ ಪದವಿಯ ಜೊತೆಯಲ್ಲಿ ಕೌಶಲಾಭಿವೃದ್ಧಿ ಅತ್ಯವಶ್ಯಕ. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಕೌಶಲ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು.ಕೊಡಗು ವಿಶ್ವವಿದ್ಯಾಲಯದಲ್ಲಿ ಭಾನುವಾರ ಕೌಶಲ್ಯಾಭಿವೃದ್ಧಿ ಡಿಪ್ಲೊಮೋ ಕೋರ್ಸ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಹೊಸ ತಂತ್ರಜ್ಞಾನ ಅಳವಡಿಕೆಯಿಂದಾಗಿ ಉದ್ಯೋಗ ನಿರ್ವಹಣೆಗೆ ಬೇಕಾದಂತಹ ಅವಶ್ಯಕತೆಗಳು ಬದಲಾಗಿವೆ. ಇವುಗಳನ್ನ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಹಾಗೆಯೇ ಅಗತ್ಯ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ವಿದ್ಯಾರ್ಥಿಗಳು ಉತ್ತಮ ಅವಕಾಶ ಪಡೆಯಲು ಹಾಗೂ ಉದ್ಯೋಗದಲ್ಲಿ ಪ್ರಸ್ತುತರಾಗಿರಲು ತಮ್ಮ ಕ್ಷೇತ್ರದಲ್ಲಿನ ಕೌಶಲಗಳನ್ನು ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು. ಕೊಡಗು ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಪದವಿಯ ಜೊತೆಯಲ್ಲಿಯೇ ಸ್ಕಿಲ್ ಡೆವಲಪ್‌ಮೆಂಟ್ ಡಿಪ್ಲೊಮೋ ಕೋರ್ಸ್‌ನ್ನು ಉಚಿತವಾಗಿ ಪಡೆಯಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ. ಕೊಡಗು ವಿಶ್ವವಿದ್ಯಾನಿಯಲದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.ಶಾಸಕರಾದ ಮಂತರ್ ಗೌಡ ಮಾತನಾಡಿ, ವಿದ್ಯಾಭ್ಯಾಸದ ಜೊತೆಯಲ್ಲಿಯೇ ಕೌಶಲಾಭಿವೃದ್ಧಿಗೆ ಅನುವು ಮಾಡಿಕೊಡುವಂತಹ ಅವಕಾಶಗಳು ದೊರೆಯುವುದು ವಿರಳ. ಆದರೆ ರಾಜ್ಯದಲ್ಲೇ ಮೊದಲ ಬಾರಿಗೆ ಕೊಡಗು ವಿಶ್ವವಿದ್ಯಾಲಯದಲ್ಲಿ ಇಂತಹ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಉಚಿತವಾಗಿ ತಮ್ಮ ಕೌಶಲವನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯೋಗ ಪಡೆದುಕೊಂಡ ನಂತರವೂ ಕೌಶಲವನ್ನು ವೃದ್ಧಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್. ಆಲೂರ್ ಸೇರಿದಂತೆ ಅಧಿಕಾರಿಗಳು ಇದ್ದರು. ವಿದ್ಯಾರ್ಥಿಗಳಿಗೆ ಡಿಪ್ಲೊಮೋ ಕೋರ್ಸ್‌ನ ಪಠ್ಯಪುಸ್ತಕಗಳ ಕಿಟ್ ಹಾಗೂ ಕೌಶಲಾಭಿವೃದ್ಧಿ ತರಬೇತಿ ಪಡೆದ ಉಪನ್ಯಾಸಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.