ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಿದ್ಯಾರ್ಥಿಗಳು ಬಾಲಾಪರಾಧ, ಲೈಂಗಿಕ ದೌರ್ಜನ್ಯ, ಶೋಷಣೆಗಳಂತಹ ಅಪರಾಧಕೃತ್ಯಗಳಿಗೆ ಒಳಗಾಗದಂತೆ ಎಚ್ಚರಿಕೆ ವಹಿಸುವ ಮೂಲಕ ತಮ್ಮ ಸುಂದರ ಬದುಕುನ್ನು ರೂಪಿಸಿಕೊಂಡು ಸಮಾಜದಲ್ಲಿ ಮಾದರಿ ಪ್ರಜೆಗಳಾಗಬೇಕೆಂದು ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್ ತಿಳಿಸಿದರು.ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಫೋಕ್ಸೋ ಕಾಯ್ದೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಗರಿಕ ಪ್ರಪಂಚದ ಆಕರ್ಷಣೆಗಳಿಗೆ ಒಳಗಾಗದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಅಧ್ಯಯನದ ಕಡೆ ಹೆಚ್ಚು ಒತ್ತು ಕೊಡಬೇಕು. ಮೊಬೈಲ್ ಗೀಳನ್ನು ಅಂಟಿಸಿಕೊಳ್ಳದೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಗುರುಹಿರಿಯರ, ತಂದೆತಾಯಿಗಳ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.
ವಿಜ್ಞಾನ, ತಂತ್ರಜ್ಞಾನದ ಪ್ರಂಪಚದಲ್ಲಿ ಎಲ್ಲಾ ಮಾಹಿತಿಯೂ ಸುಲಭವಾಗಿ ದೊರಕುತ್ತದೆ. ನಮ್ಮ ಶಿಕ್ಷಣ ಹೊರಗಿನ ಪ್ರಪಂಚದ ಆಸೆ, ಆಕಾಂಕ್ಷೆಗಳಿಗೆ ತಲೆಕೆಡಿಸಿಕೊಳ್ಳದೆ ಶಿಕ್ಷಣವನ್ನೆ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಸಾಧಿಸುವ ಛಲವನ್ನು ಹೊಂದಬೇಕು. ಗುರಿ, ಪ್ರಾಮಾಣಿಕತೆ, ಉತ್ತಮ ಆಲೋಚನೆ, ಸಮಯಪಾಲನೆಯನ್ನು ಮೈಗೂಡಿಸಿಕೊಂಡು ಸಂಸ್ಕಾರವಂತರಾಗಿ ಯಶಸ್ವಿನ ಹಾದಿಯಲ್ಲಿ ಸಾಗಬೇಕು ಎಂದರು.ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕೆ ಹೊರತು ಆಡಂಬರ, ಸಮಾಜಘಾತಕ ಕೃತ್ಯಗಳಿಗೆ ಒಳಗಾಗಿ ತಮ್ಮ ಜೀವನವನ್ನು ನರಕ ಮಾಡಿಕೊಳ್ಳಬಾರದು. ತಂದೆ ತಾಯಿಗಳು ನಿಮಗೆ ಕಷ್ಟಪಟ್ಟು ವಿದ್ಯಾಭ್ಯಾಸ ಕೊಡಿಸುತ್ತಾರೆ. ಅವರ ಕಷ್ಟವನ್ನು ನೆನಪಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು. ನಿಮಗೆ ಯಾವುದೇ ಸಮಸ್ಯೆಗಳು ಎದುರಾದಾಗ ತಂದೆ ತಾಯಿಗಳ ಅಥವಾ ಗುರುಗಳ ಬಳಿ ಹೇಳಿಕೊಳ್ಳಬೇಕು. ನಿಮ್ಮಲ್ಲಿ ಜಾಗೃತಿ ಮೂಡಲಿ ಎಂಬ ಕಾರಣಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತಿದ್ದು ನೀವು ತಿಳಿದುಕೊಂಡು ಬೇರೆಯವರನ್ನೂ ಜಾಗೃತರನ್ನಾಗಿ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಗಳ ಕಾರ್ಯದರ್ಶಿ ಎಸ್.ಬಿ. ಜಗದೀಶ್, ಮುಖ್ಯಶಿಕ್ಷಕಿ ವಿಜಯಕುಮಾರಿ, ಮಹಿಳಾ ಪೋಲಿಸ್ ಸಿಬ್ಬದಿ, ಬೋಧಕ, ಬೋಧಕೇತರ ವರ್ಗದವರು ಭಾಗವಹಿಸಿದ್ದರು. ನಂತರ ಉಪನ್ಯಾಸಕರು ಮತ್ತು ಶಿಕ್ಷಕ ವರ್ಗದವರಿಗೆ ಪ್ರತ್ಯೇಕವಾಗಿ ಸೈಬರ್ ಅಪರಾಧ, ಮೋಸ, ವಂಚನೆ, ಬ್ಯಾಂಕ್ ಅಕೌಂಟ್‌ಗಳಲ್ಲಿನ ಹಣವನ್ನು ಹೇಗೆ ಲಪಟಾಯಿಸುತ್ತಾರೆಂಬುದರ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.