ನರಸಿಂಹರಾಜಪುರಗುರುಗಳು, ಹೆತ್ತವರು ಹಾಗೂ ಕನ್ನಡ ಭಾಷೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಗೌರವ ನೀಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಕರೆ ನೀಡಿದರು.
-ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಗುರುಗಳು, ಹೆತ್ತವರು ಹಾಗೂ ಕನ್ನಡ ಭಾಷೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಗೌರವ ನೀಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಕರೆ ನೀಡಿದರು.
ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪ, ಕಾಲೇಜಿನ ವಿದ್ಯಾರ್ಥಿ ಯುವ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷೆ ಸುಂದರ ಭಾಷೆ. ಮಾತನಾಡಿದ್ದನ್ನೇ ಬರೆಯುವ ಹಾಗೂ ಬರೆದಿದ್ದನ್ನೇ ಮಾತನಾಡುವ ಸುಲಭವಾದ ಭಾಷೆ ಕನ್ನಡ. ವಿಶ್ವದಲ್ಲೇ ಅದ್ಭುತವಾದ ವ್ಯಾಕರಣ, ಛಂದಸ್ಸು ಇರುವ 3 ಸ್ಥಾನದಲ್ಲಿರುವ ಭಾಷೆ. ನಮ್ಮ ನಾಡ ಗೀತೆಗೆ ಈ ವರ್ಷ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಸಾಪ ತಾಲೂಕಿನಾದ್ಯಂತ ಕಾರ್ಯಕ್ರಮ ನಡೆಸಿದೆ ಎಂದರು.
ಕನ್ನಡ ಉಪನ್ಯಾಸಕ ಪಿ.ಜಿ. ವರ್ಗೀಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯನ್ನು ಯಾರೂ ಬೇಕಾದರೂ ನಿರರ್ಗಳವಾಗಿ ಮಾತನಾಡಬಹುದು. ಆಟೋ ಚಾಲಕರು, ರೈತರು, ಶ್ರಮಿಕ ವರ್ಗದವರು ಹೆಚ್ಚಾಗಿ ಕನ್ನಡ ಭಾಷೆಯಲ್ಲೇ ಮಾತನಾಡಿ ಕನ್ನಡ ಭಾಷೆಗೆ ಗೌರವ ತಂದಿದ್ದಾರೆ.ಆದರೆ, ನಗರ ಪ್ರದೇಶದಲ್ಲಿ ಕನ್ನಡ ಕಡಿಮೆಯಾಗುತ್ತಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಟೂಕಪ್ಪ ಮಾತನಾಡಿ, ಕನ್ನಡದ ಕವಿಗಳು, ಸಾಹಿತಿಗಳು ಬರೆದ ಗ್ರಂಥಗಳನ್ನು ವಿದ್ಯಾರ್ಥಿಗಳು ಓದಬೇಕು. ಮೇರು ಕವಿ ಕುವೆಂಪು ನಮ್ಮ ಪಕ್ಕದ ತಾಲೂಕಿನ ಕೊಪ್ಪದಲ್ಲಿ ಹುಟ್ಟಿ ಬೆಳೆದವರು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ ಶಾಲೆ ಉಳಿಸಬೇಕು ಎಂದರು. ಮುತ್ತಿನಕೊಪ್ಪ ಮಲ್ಲಿಕಾರ್ಜುನ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿದರು. ಅತಿಥಿಗಳಾಗಿ ಉಪನ್ಯಾಸಕ ಅಭಿಷೇಕ್, ಸ್ವಾತಿ, ಕಾಲೇಜಿನ ವಿದ್ಯಾರ್ಥಿ ಯುವ ಪರಿಷತ್ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷೆ ಸಿಮ್ರಾನ್ ಇದ್ದರು.
ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿನಿಯರಾದ ಜಿ. ದಿವ್ಯ, ಅನುಕುಮಾರಿ ಹಾಗೂ ನಂದಿತಾ ಅವರಿಗೆ ಕಾಲೇಜಿನಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೋಕಿಲ ಪ್ರಾರ್ಥಿಸಿದರು. ಸ್ವಾತಿ ಸ್ವಾಗತಿಸಿದರು. ಅಭಿಷೇಕ್ ವಂದಿಸಿದರು.