ಸಾರಾಂಶ
ನಿಮಗೆ ವಿದ್ಯಾ ದಾನ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಲು ಶ್ರಮಿಸಿದ ನಿಮ್ಮ ಗುರುಗಳಿಗೆ ಮೊದಲು ಗೌರವ ಕೊಡಬೇಕು. ಜನ್ಮ ನೀಡಿದ ತಂದೆ-ತಾಯಿಗಳು ಸಮಾಜದಲ್ಲಿ ನಿಮ್ಮನ್ನು ಗುರುತಿಸುವಂತೆ ಮಾಡಲು ಕಷ್ಟಪಟ್ಟು ವ್ಯಾಸಂಗ ಕೊಡಿಸುತ್ತಾರೆ.
ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾದಾನ ಮಾಡಿದ ಗುರುಗಳು, ಜನ್ಮ ನೀಡಿದ ತಂದೆ ತಾಯಿಗಳಿಗೆ ಗೌರವ ಕೊಡುವುದನ್ನು ಮಕ್ಕಳು ಬಾಲ್ಯದಿಂದಲೇ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕೆಂಪಯ್ಯನದೊಡ್ಡಿ ಗ್ರಾಮದ ರಮೇಶ್ ಶಿವಯೋಗಿ ತಿಳಿಸಿದರು.ವಳಗೆರೆದೊಡ್ಡಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್‌ನ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ಷರ ಅಭ್ಯಾಸ ಹಾಗೂ ಸರಸ್ವತಿ ಪೂಜೆಯಲ್ಲಿ ವಿದ್ಯಾರ್ಥಿಗಳಿಗೆ ಓಂಕಾರ ಎಂಬ ಬೀಜಾಕ್ಷರವನ್ನು ಬರೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಮಗೆ ವಿದ್ಯಾ ದಾನ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಲು ಶ್ರಮಿಸಿದ ನಿಮ್ಮ ಗುರುಗಳಿಗೆ ಮೊದಲು ಗೌರವ ಕೊಡಬೇಕು. ಜನ್ಮ ನೀಡಿದ ತಂದೆ-ತಾಯಿಗಳು ಸಮಾಜದಲ್ಲಿ ನಿಮ್ಮನ್ನು ಗುರುತಿಸುವಂತೆ ಮಾಡಲು ಕಷ್ಟಪಟ್ಟು ವ್ಯಾಸಂಗ ಕೊಡಿಸುತ್ತಾರೆ. ನೀವು ಉನ್ನತ ಹುದ್ದೆಗೆ ಹೋದಾಗ ಪೋಷಕರನ್ನು ಕಡಗಣಿಸದೆ ಪ್ರೀತಿ ವಿಶ್ವಾಸ ಹಾಗೂ ಗೌರವ ಕೊಡುವುದನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆ ಹಾಗೂ ಮುಂದಿನ ಭವಿಷ್ಯವನ್ನು ಉತ್ತಮ ವಾಗಿಸಿಕೊಳ್ಳಲು ಅಕ್ಷರ ಅಭ್ಯಾಸವನ್ನು ಆಯೋಜಿಸಿದ್ದೇವೆ. ಪೋಷಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಈ ವೇಳೆ ಸಂಸ್ಥೆ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್, ಅಕ್ಷತಾ ಅಶ್ವಿನ್ ಕುಮಾರ್ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.