ಶಾಲಾ ಕಾಲೇಜುಗಳ ತರಗತಿಯಲ್ಲಿ ಕಲಿಯುವ ವಿದ್ಯೆಯಷ್ಟೇ ಶಿಕ್ಷಣವಲ್ಲ. ಕಲೆ ಸಾಹಿತ್ಯ ಸಂಸ್ಕೃತಿ ನಾಡು ನುಡಿ ಇವೆಲ್ಲವನ್ನು ಕಲಿಯಬೇಕೆಂದರೆ ಹೊರಗಿನ ಶಿಕ್ಷಣವೂ ಮಕ್ಕಳಿಗೆ ಬಹುಮುಖ್ಯ. ವಿದ್ಯಾರ್ಥಿ ದಿಸೆಯಲ್ಲಿ ಪಠ್ಯೇತರ ಚಟುವಟಿಕೆಗಳ ಬೆಲೆ ಗೊತ್ತಾಗುವುದಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಷ್ಟು ಮುಂದಿನ ದಿನಗಳಲ್ಲಿ ಬಹಳಷ್ಟು ಉಪಯೋಗಗಳು ಸಿಗುತ್ತವೆ. ತಮ್ಮಲ್ಲಿನ ಪ್ರತಿಭೆ ಹೊರಹಾಕುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಾಲಾ ಹಂತದ ವಿದ್ಯಾರ್ಥಿಗಳು ತಮ್ಮೊಳಗೆ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರತಿಭಾ ಕಾರಂಜಿಯಲ್ಲಿ ಹೊರಹಾಕುವ ಮೂಲಕ ಅಳಿವಿನ ಹಂಚಿಗೆ ಹೋಗುತ್ತಿರುವ ಗ್ರಾಮೀಣ ಸೊಗಡಿನ ರಂಗ ಕಲೆ, ಜಾನಪದ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆ ಕಾಪಾಡಬಹುದು ಎಂದರು.ಶಾಲಾ ಕಾಲೇಜುಗಳ ತರಗತಿ ಕೊಠಡಿಯಲ್ಲಿ ಕಲಿಯುವ ವಿದ್ಯೆಯಷ್ಟೇ ಶಿಕ್ಷಣವಲ್ಲ. ಕಲೆ ಸಾಹಿತ್ಯ ಸಂಸ್ಕೃತಿ ನಾಡು ನುಡಿ ಇವೆಲ್ಲವನ್ನು ಕಲಿಯಬೇಕೆಂದರೆ ಹೊರಗಿನ ಶಿಕ್ಷಣವೂ ಮಕ್ಕಳಿಗೆ ಬಹುಮುಖ್ಯ. ವಿದ್ಯಾರ್ಥಿ ದಿಸೆಯಲ್ಲಿ ಪಠ್ಯೇತರ ಚಟುವಟಿಕೆಗಳ ಬೆಲೆ ಗೊತ್ತಾಗುವುದಿಲ್ಲ. ಮುಂದೆ ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡುವ ಸಮಯದಲ್ಲಿ ಈ ಚಟುವಟಿಕೆಗಳ ಮಹತ್ವ ಅರ್ಥವಾಗುತ್ತದೆ ಎಂದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಸೂಪ್ತ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ವೇದಿಕೆ ಅವಕಾಶ ಕಲ್ಪಿಸಿಕೊಟ್ಟಿದೆ. ತಾಲೂಕು ಮಟ್ಟದ ಪಾಲ್ಗೊಂಡಿರುವ ಮಕ್ಕಳು ಉತ್ತಮ ಪ್ರದರ್ಶನ ಕೊಟ್ಟು ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿನ ಹಿರಿಮೆ ಹೆಚ್ಚಿಸಬೇಕು ಎಂದು ಶುಭ ಹಾರೈಸಿದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ. ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಕಲೆ, ರಂಗಭೂಮಿ, ಜಾನಪದ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.
ಮಂಡ್ಯ ಡಯಟ್ನ ಉಪನಿರ್ದೇಶಕ ಶ್ರೀಕಂಠಪ್ರಸಾದ್ ಕಾರ್ಯಕ್ರಮ ಕುರಿತು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಸಮಾರಂಭಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಸಂವಿಧಾನ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಅಶೋಕ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಶಿಕ್ಷಕರ ವೃಂದ ಸಂಘಗಳ ಪದಾಧಿಕಾರಿಗಳಾದ ಜಗನ್ನಾಥ್, ರುದ್ರೇಶ್, ನಿಂಗರಾಜು, ಮಹೇಶ್, ಬಿ.ಸಿ.ಸುರೇಶ್, ದೇವರಾಜು, ಕೃಷ್ಣಮೂರ್ತಿ, ರಾಮಚಂದ್ರು, ಮಂಜೇಗೌಡ, ರಾಜಣ್ಣ, ಎಂ.ನಾಗೇಶ್, ವಿನಯ್ಗೌಡ, ಕಾಲೇಜು ಪ್ರಾಂಶುಪಾಲ ಜಯರಾಮು ಸೇರಿದಂತೆ ಹಲವರು ಇದ್ದರು.