ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿರಿ: ಸೋಮಶೇಖರ್ ನಾಯಕ್

| Published : Mar 09 2025, 01:47 AM IST

ಸಾರಾಂಶ

ಯಳಂದೂರು ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ವತ್ ಇನ್‌ಫ್ರಾ ಪ್ರೈ.ಲಿ.ನ ಸೋಮಶೇಖರ್ ನಾಯಕ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಈಚೆಗೆ ವಿದ್ಯಾರ್ಥಿಗಳು ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದು ಇದರಿಂದ ದೂರವಿರಬೇಕು ಎಂದು ವಿದ್ವತ್ ಇನ್‌ಫ್ರಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್ ನಾಯಕ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೂಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಓದುವಾಗ ಮನಸ್ಸು ವಿಚಲಿತವಾಗಬಾರದು. ಓದು ನಮ್ಮ ಭವಿಷ್ಯ ರೂಪಿಸುವ ಸಾಧನವಾಗಿದೆ. ಇದನ್ನು ಪೂರ್ಣಗೊಳಿಸದೆ ನಾವು ಬೇರೆ ಯಾವುದಕ್ಕೂ ತಲೆಕೆಸಿಡಿಕೊಳ್ಳಬಾರದು. ಮೊಬೈಲ್‌ಗಳು, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಳ್ಳಬಾರದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಎಸ್‌ಡಿವಿಎಸ್ ವಿದ್ಯಾಸಂಸ್ಥೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿದ್ದು ಇನ್ನಷ್ಟು ಉತ್ತಮ ವಿದ್ಯಾರ್ಥಿಗಳು ಇಲ್ಲಿ ಭವಿಷ್ಯ ರೂಪಿಸಿಕೊಳ್ಳಲಿ. ನಮ್ಮ ಸಂಸ್ಥೆಯ ವತಿಯಿಂದ ಪ್ರತಿ ವರ್ಷವೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಶಾಲೆಯ ೫ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಅಲ್ಲದೆ ಈ ಪಟ್ಟಣದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಾವು ಭಾಗವಹಿಸಲಿದ್ದೇವೆ ಎಂದರು.ಶಾಲೆಯ ಹಳೆಯ ವಿದ್ಯಾರ್ಥಿನಿ ಡಾ.ಪಿ.ಸ್ಪೂರ್ತಿ ಮಾತನಾಡಿ, ನಾನು ಎಂಬಿಬಿಎಸ್ ಮುಗಿಸಿ ಎಂಎಸ್ ಮಾಡುತ್ತಿರುವುದಕ್ಕೆ ಈ ಶಾಲೆಯಲ್ಲಿ ಹಾಕಿಕೊಟ್ಟ ಶಿಕ್ಷಣದ ಅಡಿಪಾಯವೇ ಸ್ಪೂರ್ತಿಯಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಪೋಷಕರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಪೋಷಕರ ನಿರ್ದೇಶನಗಳನ್ನು ಪಾಲಿಸಬೇಕು. ತಮ್ಮ ಕಲಿಕೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಬೇಕು, ನಾವು ಕಲಿತು, ಕೆಲಸ ಪಡೆದು ನಮ್ಮ ಪೋಷಕರಿಗೆ ನೆರವಾಗಬೇಕು. ಇದು ನಮ್ಮ ಧ್ಯೇಯವಾಗಬೇಕು ಎಂದು ಸಲಹೆ ನೀಡಿದರು.ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ಶಾಲೆಯ ಹಳೆಯ ವಿದ್ಯಾರ್ಥಿನಿ ಎಲ್.ಪೂಜಾಶ್ರೀ, ಸಂಸ್ಥಾಪಕ ಪಿ. ವೀರಭದ್ರಪ್ಪ ಮಾತನಾಡಿದರು. ಶಾಲೆಯ ಎಂ. ವಿಖ್ಯಾತ್, ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ ಗುಂಬಳ್ಳಿ ಬಸವರಾಜು, ಮಹಾದೇವ ಸೇರಿದಂತೆ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.