ವಿದ್ಯಾರ್ಥಿಗಳು ಯುವನಿಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಡೀಸಿ ಗೋವಿಂದರೆಡ್ಡಿ

| Published : Jan 07 2024, 01:30 AM IST

ವಿದ್ಯಾರ್ಥಿಗಳು ಯುವನಿಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಡೀಸಿ ಗೋವಿಂದರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋದಾಯಿಸಿಕೊಳ್ಳಲು ಅಧಿಕಾರಿಗಳು ತಿಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್

ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಯುವನಿಧಿ ಯೋಜನೆ ಲಾಭವನ್ನು ಜಿಲ್ಲೆಯ ವಿದ್ಯಾರ್ಥಿಗಳು ಪಡೆಯಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, 2023ರಲ್ಲಿ ಪದವಿ ಹಾಗೂ ಡಿಪ್ಲೊಮಾದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಲಾಭ ಪಡೆಯಲು ಅವರ ಹೆಸರನ್ನು ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ನೊಂದಾಯಿಸಿಕೊಳ್ಳುವಂತೆ ಆಯಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕೆಂದು ಹೇಳಿದರು.

ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಇಲ್ಲದವರು, ಸ್ವಯಂ ಉದ್ಯೋಗ ಮಾಡಿದವರು, ಉನ್ನತ ವಿದ್ಯಾಭ್ಯಾಸ ಪಿಜಿ, ಎಂಎ, ಎಂಎಸ್ಸಿ, ಬಿಎಡ್ ಸೇರಿದಂತೆ ಇತರೆ ಕೋರ್ಸ್‌ಗಳನ್ನು ಮಾಡಿದವರು (ಕರ್ನಾಟಕದಲ್ಲಿ ವಾಸವಿರುವವರು ಕನಿಷ್ಠ 6 ವರ್ಷಗಳವರೆಗೆ ಪದವಿ ಅಥವಾ ಡಿಪ್ಲೊಮಾ ಅಧ್ಯಯನ ಮಾಡಿದವರು) ಯುವನಿಧಿಗೆ ನೋಂದಣಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ದಾಖಲಾತಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಥವಾ ಡಿಪ್ಲೊಮಾ ಪ್ರಮಾಣ ಪತ್ರಗಳಾಗಿವೆ ಎಂದರು.

ಉಚಿತವಾಗಿ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾಸಿಕವಾಗಿ ನಿರುದ್ಯೋಗ ದೃಢೀಕರಣವು ಕಡ್ಡಾಯವಾಗಿದೆ. ತಪ್ಪು ಮಾಹಿತಿ ನೀಡಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ಪ್ರತಿ ತಿಂಗಳು ಪದವೀಧರರಿಗೆ 3000 ರು. ಹಾಗೂ ಡಿಪ್ಲೊಮಾ ಪದವೀಧರರಿಗೆ 1500 ರು. ನೀಡಲಾಗುತ್ತಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು. ಈಗಾಗಲೇ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ. ಬೀದರ್‌ ಜಿಲ್ಲೆಯ ಹೆಚ್ಚಿನ ಅರ್ಹ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಈ ಮಾಹಿತಿಯನ್ನು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದು ಹೇಳಿದರು.

ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಬೀದರ್‌ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಸವರಾಜ, ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ತಾಲೂಕಿನ ತಹಶಿಲ್ದಾರರು ಸೇರಿದಂತೆ ಇತರರು ಭಾಗವಹಿಸಿದ್ದರು.