ಸಾರಾಂಶ
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಬುಧವಾರ 38ನೇ ಘಟಿಕೋತ್ಸವ ಸಂಭ್ರಮದಿಂದ ನಡೆಯಿತು. 41 ಪಿಎಚ್‌ಡಿ, 197 ಸ್ನಾತಕೋತ್ತರ, 625 ಸ್ನಾತಕ ಪದವಿಗಳು ಒಳಗೊಂಡಂತೆ ಒಟ್ಟು 863 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವ ಉದ್ಘಾಟನಾ ಭಾಷಣ ಮಾಡಿದ ರಾಜ್ಯಪಾಲ, ವಿವಿ ಕುಲಾಧಿಪತಿ ಥಾವರ್‌ಚಂದ್ ಗೆಹಲೋತ್, ವಿಶ್ವಮಟ್ಟದಲ್ಲಿ ಭಾರತದ ಕೃಷಿ ಮತ್ತು ಕೃಷಿ ಕ್ಷೇತ್ರದ ಸಂಶೋಧನೆಗಳು, ಸಾಧನೆಗಳು ಹೆಮ್ಮೆ ಮೂಡಿಸುತ್ತವೆ. ಯುವ ಸಂಶೋಧಕರು ಕ್ಷೇತ್ರದ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಹಿಡಿಯಬೇಕು ಎಂದು ಕರೆ ನೀಡಿದರು.ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಕುಲಪತಿ ಡಾ. ಚಿ. ಶ್ರೀನಿವಾಸ ರಾವ್ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣರ ಜೀವನಮಟ್ಟ ಸುಧಾರಣೆಗೆ ಅವರ ಜತೆ ಸೇರಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅತ್ಯುತ್ತಮ ಸಂಸ್ಥೆಯಾಗಿದೆ. ರೈತರ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಶೋಧನೆ, ಕೃಷಿ ತಂತ್ರಜ್ಞಾನದ ವರ್ಗಾವಣೆ, ಹೊಸ ತಳಿಗಳ ಪರಿಚಯಿಸುವಲ್ಲಿ ಈ ವಿಶ್ವವಿದ್ಯಾಲಯದ ಪಾತ್ರ ಮತ್ತು ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಹಾವೇರಿಯ ಮುತ್ತಣ್ಣ ಭೀರಪ್ಪ ಪೂಜಾರ, ಹುಬ್ಬಳ್ಳಿಯ ದ್ಯಾಮನಗೌಡ ತಿಮ್ಮನಗೌಡ ಪಾಟೀಲ ಮತ್ತು ಬೆಳಗಾವಿ ಜಿಲ್ಲೆ ಖಾನಾಪುರದ ಶಂಕರ ಹನುಮಂತ ಲಂಗಟಿ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪ್ರದಾನ ಮಾಡಿ ಗೌರವಿಸಿದರು.
ಚಿನ್ನದ ಹುಡುಗ/ಹುಡುಗಿ:ಕೃಷಿ ಪದವಿ ಪಡೆದ ವಿದ್ಯಾರ್ಥಿ ಕಾರ್ತಿಕ ಚಿಗರಿ ಹಾಗೂ ವಿದ್ಯಾರ್ಥಿನಿ ಐಶ್ವರ್ಯಾ ಬೆಟಗೇರಿ ಅವರು ಹೆಚ್ಚು ಚಿನ್ನದ ಪದಕಗಳೊಂದಿಗೆ ಪ್ರಸಕ್ತ ಸಾಲಿಗೆ ಕೃಷಿ ವಿಶ್ವವಿದ್ಯಾಲಯದ ಚಿನ್ನದ ಹುಡುಗ ಮತ್ತು ಚಿನ್ನದ ಹುಡುಗಿ ಎಂಬ ಬಿರುದಿಗೆ ಭಾಜನರಾದರು.
ಸಮಾರಂಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಸ್ವಾಗತಿಸಿದರು.