ವಿದ್ಯಾರ್ಥಿಗಳು ಉನ್ನತ ಸಾಧಕರಾಗುವತ್ತ ಚಿಂತನೆ ನಡೆಸಿ

| Published : Jul 03 2025, 11:48 PM IST

ಸಾರಾಂಶ

ಟೈಮ್ಸ್ ಹಾಸನ ಪಿಯು ಕಾಲೇಜು ವತಿಯಿಂದ ಏರ್ಪಡಿಸಿದ್ದ ಫ್ರೆಶರ್ಸ್ ಡೇ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಇಂತಹ ಅವಕಾಶಗಳು ಇರಲಿಲ್ಲ, ಬದಲಾದ ಕಾಲಘಟ್ಟದಲ್ಲಿ ಉತ್ತಮ ಅವಕಾಶಗಳಿದ್ದು ಹೆಚ್ಚಿನ ಪರಿಶ್ರಮ ಪಟ್ಟಾಗ ಸಾಧನೆ ಸಾಧ್ಯವಾಗಲಿದೆ. ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ದೊರಕಿಸುವ ಉದ್ದೇಶದಿಂದ ರಾಜ್ಯದಲ್ಲೆ ವಿನೂತನವಾದ ಮಕ್ಕಳ ಮನೆ ಶಾಲೆಗಳನ್ನು ತಾಲೂಕಿನಲ್ಲಿ ತೆರೆಯಲಾಗಿದೆ. ಅತ್ಯಂತ ಕಡಿಮೆ ಹಣದಲ್ಲಿ ಕಾನ್ವೆಂಟ್‌ಗಳಲ್ಲಿ ನೀಡುವ ಶಿಕ್ಷಣವನ್ನು ಜನಸಾಮಾನ್ಯರಿಗೆ ದೊರಕಿಸುವ ಪ್ರಯತ್ನ ನಡೆದಿದ್ದು ಜನರು ಇದರ ಉಪಯೋಗ ಪಡೆಯುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪ್ರಸ್ತುತ ದಿನಗಳಲ್ಲಿ ಸಾಧನೆಗೆ ವಿಫುಲ ಅವಕಾಶಗಳಿದ್ದು, ಪರಿವರ್ತನೆಗಾಗಿ ವಿದ್ಯಾರ್ಥಿಗಳು ಉನ್ನತ ಸಾಧಕರಾಗುವತ್ತ ಚಿಂತನೆ ನಡೆಸಬೇಕು ಎಂದು ಶಾಸಕ ಎ. ಮಂಜು ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಟೈಮ್ಸ್ ಹಾಸನ ಪಿಯು ಕಾಲೇಜು ವತಿಯಿಂದ ಏರ್ಪಡಿಸಿದ್ದ ಫ್ರೆಶರ್ಸ್ ಡೇ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಇಂತಹ ಅವಕಾಶಗಳು ಇರಲಿಲ್ಲ, ಬದಲಾದ ಕಾಲಘಟ್ಟದಲ್ಲಿ ಉತ್ತಮ ಅವಕಾಶಗಳಿದ್ದು ಹೆಚ್ಚಿನ ಪರಿಶ್ರಮ ಪಟ್ಟಾಗ ಸಾಧನೆ ಸಾಧ್ಯವಾಗಲಿದೆ. ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ದೊರಕಿಸುವ ಉದ್ದೇಶದಿಂದ ರಾಜ್ಯದಲ್ಲೆ ವಿನೂತನವಾದ ಮಕ್ಕಳ ಮನೆ ಶಾಲೆಗಳನ್ನು ತಾಲೂಕಿನಲ್ಲಿ ತೆರೆಯಲಾಗಿದೆ. ಅತ್ಯಂತ ಕಡಿಮೆ ಹಣದಲ್ಲಿ ಕಾನ್ವೆಂಟ್‌ಗಳಲ್ಲಿ ನೀಡುವ ಶಿಕ್ಷಣವನ್ನು ಜನಸಾಮಾನ್ಯರಿಗೆ ದೊರಕಿಸುವ ಪ್ರಯತ್ನ ನಡೆದಿದ್ದು ಜನರು ಇದರ ಉಪಯೋಗ ಪಡೆಯುವಂತೆ ತಿಳಿಸಿದರು. ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆ ಮಹಿಳೆಯರ ಪಾತ್ರವಿದೆ. ಉನ್ನತ ಶಿಕ್ಷಣ ಕಲಿತ ನಂತರ ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ನಿರ್ಲಕ್ಷಿಸದೆ ಅವರ ಶ್ರಮಕ್ಕೆ ಋಣಿಯಾಗಿರಬೇಕು ಎಂದರು.

ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಕಷ್ಟಗಳನ್ನು ಎದುರಿಸುವ ಮೂಲಕ ಸಮಾಜಕ್ಕೆ ಕೊಡುಗೆಯಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ 15 ವರ್ಷಗಳ ಹಿಂದೆ ಪ್ರಾರಂಭವಾದ ಕಾಲೇಜು ಉತ್ತಮ ಬೆಳವಣಿಗೆಯತ್ತ ಸಾಗಿದೆ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಂಡು ನನಸಾಗಿಸುವ ಪ್ರಯತ್ನ ನಡೆಸಿದಾಗ ಮಾತ್ರ ಸಾಧನೆ ಮೂಡಿಬರಲು ಸಾಧ್ಯ, ಪೋಷಕರು ತಮ್ಮ ಮಕ್ಕಳನ್ನು ವೈದ್ಯಕೀಯ, ಎಂಜಿನಿಯರಿಂಗ್‌ ಶಿಕ್ಷಣಕ್ಕಷ್ಟೆ ಸೀಮಿತಗೊಳಿಸದೆ ಉನ್ನತ ಸಂಸ್ಥೆಗಳನ್ನು ಹುಟ್ಟುಹಾಕಲು ಪ್ರೇರಣೆ ನೀಡಬೇಕು. ವೇತನಕ್ಕೆ ಕೈ ಒಡ್ಡದೆ ವೇತನ ನೀಡುವಂತಾಗಲು ಪ್ರಯತ್ನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪಿ.ನವೀನ್ ಉಲಿವಾಲ ಮಾತನಾಡಿದರು. ಉಪನ್ಯಾಸಕರಾದ ಪ್ರಜ್ವಲ್, ಕೃಷ್ಣಮೂರ್ತಿ, ರಾಕೇಶ್ ಇತರರಿದ್ದರು. ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗ ಪ್ರತಿಭಾ ಪುರಸ್ಕಾರ ನೀಡಿ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.