ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ಹೊಸದಾಗಿ ಬಿಸಿಎ ಕೋರ್ಸ್ ಪ್ರಾರಂಭಿಸಲಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಕೆ ಸುರೇಶ್ ಹೇಳಿದರು.ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆಗೆ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಇಂದು ಖಾಸಗಿ ಶಾಲೆ ಕಾಲೇಜುಗಳು ವಿದ್ಯೆಯನ್ನು ವ್ಯಾಪಾರ ವೃತ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ಶಾಲೆಗಳ ಅಂದಚೆಂದಕ್ಕೆ ಪೋಷಕರು ಮಾರು ಹೋಗುತ್ತಿದ್ದಾರೆ, ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು, ಪ್ರಯೋಗಾಲಯ, ಕ್ರೀಡೆ, ಇನ್ನೂ ಮುಂತಾದ ಚಟುವಟಿಕೆಗಳು ಇರುತ್ತವೆ ಅಲ್ಲದೆ ಎನ್. ಎಸ್. ಎಸ್. ಶಿಬಿರ ಕೂಡ ಇರುತ್ತದೆ. ಸರ್ಕಾರ ಕೂಡ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಆಂದೋಲನ, ಹಳ್ಳಿ ಹಳ್ಳಿಗಳಲ್ಲಿ ಶಿಬಿರಗಳನ್ನು ನಡೆಸುತ್ತಿದ್ದರೂ ಪೋಷಕರ ಮನಸ್ಸು ಖಾಸಗಿ ಶಾಲೆಗಳ ಕಡೆ ಇದೆ. ಉತ್ತಮ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಕಾಲೇಜುಗಳು ಖಾಸಗಿ ಕಾಲೇಜುಗಳ ಜೊತೆ ಪೈಪೋಟಿ ನಡೆಸುತ್ತಿವೆ, ಸರ್ಕಾರಿ ಶಾಲೆ ಕಾಲೇಜುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಪೋಷಕರು ಮಾಡಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಎಚ್.ಎಂ. ಮಾತನಾಡಿ, ಕಾಲೇಜು ವಿಶಾಲವಾದ ಆವರಣ ಮತ್ತು ಉತ್ತಮ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಉತ್ತಮವಾದ ಬೋಧಕ ವರ್ಗವಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಾಬು ಪ್ರಸಾದ್ ದೈಹಿಕ ಶಿಕ್ಷಣ ನಿರ್ದೇಶಕರು, ವಸಂತ್ ಕುಮಾರ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು, ಡಾ. ನಾಗೇಂದ್ರಪ್ಪ ಕೆ.ಟಿ. ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು ಇದ್ದರು.