ಅನುದಾನದ ಬಳಕೆ ಹಾಗೂ ಸಾರ್ವಜನವಿಕ ಸಾರಿಗೆ ವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.

ಹರಪನಹಳ್ಳಿ: ನಗರ ಸಾರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಸಮರ್ಪಕ ಬಸ್‌ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಡಾ. ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

ಹರಪನಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ನಗರಕ್ಕೆ ಹಾಗೂ ನಗರದಿಂದ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಬಸ್‌ ಗಳು ಸಂಚರಿಸುವಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ ಹಾಗೂ ಸಂಜೆ ಅಗತ್ಯ ಹೆಚ್ಚುವರಿ ಬಸ್ ಒದಗಿಸಬೇಕು, ಬಸ್‌ ಸಂಚಾರ ವೇಳಾಪಟ್ಟಿ ನಿಗದಿಪಡಿಸಿ ಪ್ರಚುರ ಪಡಿಸಿ ನಿಗದಿತ ಸಮಯಕ್ಕೆ ಸಂಚರಿಸಲು ಕ್ರಮ ಕೈಗೊಳ್ಳಬೇಕು.

ಹರಪನಹಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ನಗರ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗಾಗಿ ಕೆಕೆಆರ್ ಡಿಬಿ ಅನುದಾನದಡಿ ನಗರ ಸಾರಿಗೆ ವಾಹನಕ್ಕಾಗಿ ಮಂಜೂರಾದ ಅನುದಾನದ ವಿವರ, ಅನುದಾನದ ಬಳಕೆ ಹಾಗೂ ಸಾರ್ವಜನವಿಕ ಸಾರಿಗೆ ವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಆದರ್ಶ ವಿದ್ಯಾಲಯ, ಸರ್ಕಾರಿ ಪಾಲಿಟೆಕ್ನಿಕ್‌, ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಆಸ್ಪತ್ರೆ, ಶಿವಕೃಪ ಆಸ್ಪತ್ರೆ, ಪರ್ಲ್‌ ಶಿಕ್ಷಣ ಸಂಸ್ಥೆ, ವಿದ್ಯಾನಿಧಿ ಸ್ಕೂಲ್‌, ರೈಲ್ವೆ ನಿಲ್ದಾಣ, ದೇವರ ತಿಮಲಾಪುರ, ಶೃಂಗಾರ ತೋಟ, ಬಾಗಳಿ, ಕಣವಿಹಳ್ಳಿ, ಕೆಂಚಮ್ಮನಹಳ್ಳಿ, ಕೊಂಗನಹೊಸೂರು, ನಂದಿಬೇವೂರು ತಾಂಡಾ, ಹೊಂಬಳಗಟ್ಟಿ, ಶಿವಪುರ ತಾಂಡಾ, ಖಂಡಿಕೇರಿ, ಕುಂಚೂರು ತಾಂಡಾ, ಹರವಿ, ಲಿಂಗನಾಯ್ಕನಹಳ್ಳಿ, ನಲುವಂಜಿ, ಎಂ.ಕಲ್ಲಹಳ್ಳಿ, ಮುತ್ತಿಗೆ, ಒಬಳಾಪುರ, ಮಾಗಳ, ಕೆ.ಕಲ್ಲಹಳ್ಳಿ, ಬಿಕ್ಕಿಕಟ್ಟಿ, ಹುಲ್ಲಿಕಟ್ಟಿ, ಹೊಸ ಒಬಳಾಪುರ, ನಾರಾಯಣಪುರ, ಗುಳೇದಹಟ್ಟಿ ತಾಂಡಾ, ಕಾವಲಹಳ್ಳಿ, ಹೊನ್ನಾಪುರ, ಸೇವಾನಗರ ಮುಂತಾದ ಕಡೆ ಬಸ್‌ ಓಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಧರಣಿ ನಿರತ ಸ್ಥಳಕ್ಕೆ ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕಿ ಸುಶೀಲಾ ಬಸ್‌ ನಿಲ್ದಾಣದ ಕಂಟ್ರೋಲರ್‌ ನಾಗರಾಜ ಜೊತೆಗೂಡಿ ಭೇಟಿ ನೀಡಿ ಅಹವಾಲು ಆಲಿಸಿ ಮನವಿ ಪತ್ರ ಸ್ವೀಕರಿಸಿದರು.

ಧರಣಿಯಲ್ಲಿ ವಿದ್ಯಾರ್ಥಿಗಳ ಜತೆ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಸಮಿತಿ ಸದಸ್ಯ ಸಂತೋಷ ಗುಳೇದಹಟ್ಟಿ,ಸಂದೇರ ಪರಶುರಾಮ, ಕಲ್ಲುಕುಟುಗರ ರಾಘವೇಂದ್ರ, ಕೃಷ್ಣ ಮಲ್ಲಾಡದ, ಮೋಹನಕುಮಾರ, ಮಿಥುನ್, ಭರತ್‌ ಪಾಲ್ಗೊಂಡಿದ್ದರು.

ನಗರ ಸಾರಿಗೆ ಒದಗಿಸುವ ಕುರಿತು ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ, ಅಲ್ಲಿಂದ ಉತ್ತರ ಬಂದ ನಂತರ ಕ್ರಮ ಜರುಗಿಸುತ್ತೇವೆ, ಉಳಿದ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹರಪನಹಳ್ಳಿ ಡಿಪೊ ಮ್ಯಾನೇಜರ ಸುಶೀಲಾ ತಿಳಿಸಿದ್ದಾರೆ.