ವಿದ್ಯಾರ್ಥಿಗಳೆ ವ್ಯಸನದಿಂದ ದೂರವಿರಿ: ಸಿಪಿಐ ಸಂಜೀವ

| Published : Dec 20 2024, 12:47 AM IST

ಸಾರಾಂಶ

೧೮ ವರ್ಷದೊಳಿಗಿನ ಮಕ್ಕಳು ಬೈಕ್‌ ಓಡಿಸಬಾರದು. ಆದರೆ ಪಾಲಕರೆ ಮಕ್ಕಳ ಕೈಯಲ್ಲಿ ಬೈಕ್‌ ನೀಡುವುದು ಕೊಡಿಸುವುದು ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ.

ತೇರದಾಳ(ರ-ಬ): ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ವ್ಯಸನಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಭವಿಷ್ಯದ ಮೇಲೆ ಬರೆ ಎಳೆದುಕೊಳ್ಳುವ ಕೆಲಸ ಆಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ವ್ಯಸನದಿಂದ ದೂರವಿರಿ ಎಂದು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಹೇಳಿದರು.

ಅಪರಾಧ ಮಾಸಾಚರಣೆ ನಿಮಿತ್ತ ಗುರುವಾರ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ೧೮ ವರ್ಷದೊಳಿಗಿನ ಮಕ್ಕಳು ಬೈಕ್‌ ಓಡಿಸಬಾರದು. ಆದರೆ ಪಾಲಕರೆ ಮಕ್ಕಳ ಕೈಯಲ್ಲಿ ಬೈಕ್‌ ನೀಡುವುದು ಕೊಡಿಸುವುದು ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಲೈಸೆನ್ಸ್ ಇಲ್ಲದೆ ಬೈಕ್‌ ಓಡಿಸುವುದು ಅಪರಾಧ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಅಗತ್ಯವಾಗಿದೆ ಎಂದರು.

ಠಾಣಾಧಿಕಾರಿ ಅಪ್ಪಣ್ಣ ಐಗಳಿ ಮಾತನಾಡಿ, ಅಪಘಾತ ಹಾಗೂ ಅಪರಾಧಗಳನ್ನು ಯುವಕರೆ ಹೆಚ್ಚಾಗಿ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಳವಾಗಿದೆ. ದೇಶದ ಸಂಪತ್ತು ಆಗಿರುವ ಯುವಶಕ್ತಿ ಇಂತಹವುಗಳಿಂದ ದೂರ ಇರಬೇಕಾಗಿದೆ. ಆ ದಿಸೆಯಲ್ಲಿ ಜಾಗೃತಿ ಹೊಂದಬೇಕೆಂದರು. ಶಿಕ್ಷಕ ಬಿ.ಟಿ. ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಗುರು ಡಿ.ಎ. ಉಗಾರ, ಪ್ರಾಥಮಿಕ ವಿಭಾಗದ ಬಿ.ಜಿ.ಮುದಕನ್ನವರ, ಪೊಲೀಸ್ ಪೇದೆ ವಿವೇಕ ಸುವರ್ಣಖಂಡಿ, ಮಹಾಂತೇಶ ಗುರವ, ವಿಠ್ಠಲ ಮಾನೆ ಇದ್ದರು.