Students urged to stay away from bad habits

-ಶಾಸಕ ರಾಜಾ ವೇಣುಗೋಪಾಲನಾಯಕ ಸಲಹೆ । ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಆರ್‌ವಿಎನ್‌

------

ಕನ್ನಡಪ್ರಭ ವಾರ್ತೆ ಸುರಪುರ

ಯುವಕರು ಡ್ರಗ್ಸ್‌, ಸಿಗರೇಟ್‌, ಮದ್ಯಪಾನ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿದ್ದು, ಏಕಾಗ್ರತೆ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

ನಗರದ ಸಮೀಪದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ''''''''ಬೇಡ ಬ್ರೋ ಡ್ರಗ್ಸ್‌, ಬೇಕು ಬ್ರೋ ಲೈಫ್'''''''' ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡ್ರಗ್ಸ್‌, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಂತಹ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆಯುವ ದುಶ್ಚಟಗಳಿಂದ ದೂರವಿದ್ದು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಇಂದಿನ ಯುವಜನರೇ ದೇಶದ ಭವಿಷ್ಯವಾಗಿರುವುದರಿಂದ ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರದ ನಿರ್ದೇಶನದಂತೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಡ್ರಗ್ಸ್ ಸೇವನೆಯಿಂದ ವ್ಯಕ್ತಿಯಷ್ಟೇ ಅಲ್ಲ, ಕುಟುಂಬ ಹಾಗೂ ಸಮಾಜಕ್ಕೂ ಗಂಭೀರ ಹಾನಿಯಾಗುತ್ತದೆ. ಪೋಷಕರ ಆಶಯಕ್ಕೆ ತಕ್ಕಂತೆ ಶಿಕ್ಷಣದಲ್ಲಿ ಸಾಧನೆ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಡಿವೈಎಸ್‌ಪಿ ಜಾವೀದ್ ಇನಾಮದಾರ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ''''''''ಆಪರೇಷನ್ ರೈಸ್'''''''' ಪರಿಕಲ್ಪನೆಯನ್ನು ವಿವರಿಸಿದರು.

ರಾಜ್ಯಾದ್ಯಂತ ಪೊಲೀಸ್ ಇಲಾಖೆ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ ನಡೆಸುತ್ತಿದೆ. ಯಾರಾದರೂ ಡ್ರಗ್ಸ್ ಸೇವಿಸಲು ಒತ್ತಾಯಿಸಿದರೆ ಧೈರ್ಯವಾಗಿ ನಿರಾಕರಿಸಬೇಕು. ಡ್ರಗ್ಸ್ ಸಂಬಂಧಿತ ಮಾಹಿತಿ ದೊರೆತರೆ ಕ್ಯೂಆರ್ ಕೋಡ್‌, ಪೊಲೀಸ್ ಸಹಾಯವಾಣಿ 112 ಹಾಗೂ ಟೋಲ್‌ಫ್ರೀ 1908 ಮೂಲಕ ಅನಾಮಧೇಯವಾಗಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಡ್ರಗ್ಸ್ ವ್ಯಸನಕ್ಕೆ ಒಳಗಾದವರನ್ನು ದೂಷಿಸುವ ಬದಲು ಪುನರ್ವಸತಿ ಕೇಂದ್ರಗಳಿಗೆ ಸೇರಿಸಿ ಚಿಕಿತ್ಸೆ ನೀಡಬೇಕು. ಯುವಜನರಲ್ಲಿ ಜಾಗೃತಿ ಮೂಡಿಸಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಡ್ರಗ್ಸ್ ಬೆಳೆಸುವುದು, ತಯಾರಿಸುವುದು, ಸಾಗಾಟ, ಮಾರಾಟ ಹಾಗೂ ಅಕ್ರಮವಾಗಿ ಹೊಂದಿರುವುದು ಎನ್‌ಡಿಪಿಎಸ್‌ ಕಾಯ್ದೆಯಡಿ ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದ ಅವರು, ಗಾಂಜಾ, ಕೋಕೇನ್, ಹೆರಾಯಿನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶರಣಬಸಪ್ಪ ಸಾಲಿ, ದೂರದ ಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಸಮೀಪ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಪಿಐ ಉಮೇಶ್ ಎಂ. ನಾಯಕ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮುಖಂಡರಾದ ಯಂಕೋಬ ಸಾಹುಕಾರ, ಮಲ್ಲಣ್ಣ ಸಾಹುಕಾರ ಮುಧೋಳ, ರಾಜಶೇಖರ ಪಾಟೀಲ ವಜ್ಜಲ, ನಿಂಗಣ್ಣ ಬಾಚಿಮಟ್ಟಿ, ಶಿವರಾಜ, ಪೊಲೀಸ್ ಪೇದೆ ದಯಾನಂದ ಜಮಾದಾರ, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರೊ. ಅಂಬಿಕಾ ಸಜ್ಜನ ಪ್ರಾರ್ಥನಾ ಗೀತೆ ಹಾಡಿದರು.ಪ್ರೊ. ಗಂಗಾಧರ ಹೂಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

------

.........ಬಾಕ್ಸ್.....

ಡ್ರಗ್ಸ್‌ಗೆ ''''''''ಬೇಡ'''''''' ಎಂದು ಹೇಳಿ, ಶಿಕ್ಷಣಕ್ಕೆ ''''''''ಹೌದು'''''''' ಎಂದು ಹೇಳಿದಾಗ ಮಾತ್ರ ಉತ್ತಮ ಭವಿಷ್ಯ ಮತ್ತು ಬೆಳಗುವ ಭಾರತ ನಿರ್ಮಾಣ ಸಾಧ್ಯ. "

-ಶಾಸಕ ರಾಜಾ ವೇಣುಗೋಪಾಲನಾಯಕ

-----

ಫೋಟೊ

ಸುರಪುರ ಸಮೀಪದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ''''''''ಬೇಡ ಬ್ರೋ ಡ್ರಗ್ಸ್‌, ಬೇಕು ಬ್ರೋ ಲೈಫ್'''''''' ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಉದ್ಘಾಟಿಸಿದರು. ಡಿವೈಎಸ್‌ಪಿ ಜಾವೀದ್ ಇನಾಮದಾರ, ಪಿಐ ಉಮೇಶ್ ಎಂ. ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.

ಜು.28ಸುಆರ್ ಯು -1

ಡ್ರಗ್ಸ್‌ಗೆ ''''''''ಬೇಡ ಬ್ರೋ'''''''', ಬೆಳಗುವ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಲಿ: ಶಾಸಕ ರಾಜಾ ವೇಣುಗೋಪಾಲನಾಯಕ