ಸಾರಾಂಶ
ವಿದ್ಯಾರ್ಥಿಗಳು ರಜಾ ಅವಧಿಯಲ್ಲಿ ಶಾಲಾ ಆವಾರಕ್ಕೆ ಬರುವ ಪಕ್ಷಿಗಳಿಗೆ ನೀರು, ಆಹಾರ ಇಟ್ಟು ಗಮನ ಸೆಳೆದಿದ್ದಾರೆ.
ಗೋಕರ್ಣ: ಇಲ್ಲಿನ ವಿದ್ಯಾರ್ಥಿಗಳು ರಜಾ ಅವಧಿಯಲ್ಲಿ ಶಾಲಾ ಆವಾರಕ್ಕೆ ಬರುವ ಪಕ್ಷಿಗಳಿಗೆ ನೀರು, ಆಹಾರ ಇಟ್ಟು ಗಮನ ಸೆಳೆದಿದ್ದಾರೆ.
ಬಿಸಿಲನ ತಾಪಕ್ಕೆ ನೀರಿನ ದಾಹ ನೀಗಿಸುವ ಮಾದರಿ ಕಾರ್ಯವನ್ನು ಇಲ್ಲಿನ ಸಾಣಿಕಟ್ಟಾದ ನಿತ್ಯಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ಮಾಡಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ಈ ಪ್ರೌಢಶಾಲೆಯ ಸುತ್ತ ಅರಣ್ಯ ಪ್ರದೇಶವಿದೆ. ಪಕ್ಷಿಗಳು ಇಲ್ಲಿಗೆ ನಿತ್ಯ ಭೇಟಿ ನೀಡುತ್ತವೆ. ಶಾಲಾ ಅವಧಿಯಲ್ಲಿ ಏನಾದರೂ ಆಹಾರ ನೀಡುವ ಪರಿಪಾಠವಿದೆ. ಆದರೆ ರಜಾ ಅವಧಿಯ ಜೊತೆ ಬೇಸಿಗೆಗೆ ನೀರಿನ ಕೊರತೆಯಿಂದ ಪಕ್ಷಿಗಳು ಪರಿತಪಿಸುವುದನ್ನು ತಪ್ಪಿಸಲು ವಿಜ್ಞಾನ ಶಿಕ್ಷಕ ಶ್ರೀನಿವಾಸ ನಾಯಕ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಎತ್ತರದಲ್ಲಿ ನೀರಿನ ಪಾತ್ರೆ ಇಡುತ್ತಾರೆ. ಜೊತೆಗೆ ಧಾನ್ಯ ಹಾಕುತ್ತಾರೆ. ಇದರಿಂದ ಪಕ್ಷಿಗಳಿಗೆ ಆಹಾರ, ನೀರು ಎರಡನ್ನೂ ಒದಗಿಸಿಕೊಂಡಂತಾಗಿದೆ. ಈ ಕಾರ್ಯಕ್ಕೆ ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವೃಂದವರು ಸಹಕಾರ ನೀಡಿದ್ದಾರೆ.
ಇನ್ನು ಪ್ರೌಢಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ಉಚಿತ ಬಟ್ಟೆ, ಪಟ್ಟಿ, ಪುಸ್ತಕ, ಬಸ್ ಪಾಸ್ ಸಹ ನೀಡುವ ವ್ಯವಸ್ಥೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ಮಾಡಿದ್ದು, ಉತ್ತಮ ಉಚಿತ ಶಿಕ್ಷಣದೊಂದಿಗೆ ಪರಿಸರ ಕಾಳಜಿ, ಪ್ರಾಣಿ, ಪಕ್ಷಿಗಳ ಸಂರಕ್ಷಣೆಯ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿವಳಿಕೆ ನೀಡಿರುವುದು ಪ್ರಶಂಸನೀಯ.