ಸಾರಾಂಶ
ಶಿರಸಿ: ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಪ್ರಾರಂಭವಾಯಿತು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಹಲವು ವರ್ಷಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಅಶ್ವಥ್ ಹೆಗಡೆ ತಿಳಿಸಿದರು.ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಯನ್ಸ್ ಕ್ಲಬ್ ಮತ್ತು ಪ್ರದೀಪ್ ಜ್ಯುವೆಲರ್ಸ್ ಸಹಯೋಗದಲ್ಲಿ ನಡೆದ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ನೀಡಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದಿಂದ ನಾವು ಬಹಳಷ್ಟು ಪಡೆಯುತ್ತೇವೆ. ಅದನ್ನು ಸಾಧ್ಯವಾದಷ್ಟು ಮರಳಿ ಕೊಡಬೇಕು. ವಿದ್ಯಾರ್ಥಿಗಳೂ ಭವಿಷ್ಯದಲ್ಲಿ ತಮ್ಮ ದುಡಿಮೆಯ ಕನಿಷ್ಠ ಒಂದು ಭಾಗವನ್ನಾದರೂ ಸಮಾಜದ ಒಳಿತಿಗೆ ಮೀಸಲಿಡಬೇಕು. ಪ್ರದೀಪ್ ಜ್ಯುವೆಲರ್ಸ್ ಸಿಂಪಿಗಲ್ಲಿಯವರು ಈ ದಿಶೆಯಲ್ಲಿ ಸಮಾಜಕ್ಕೆ ಸಾಕಷ್ಟು ಸೇವೆಯನ್ನು ಮಾಡುತ್ತಾ ಬಂದಿದ್ದಾರೆ ಎಂದರು.ಪ್ರದೀಪ್ ಜ್ಯುವೆಲರ್ಸ್ ಮಾಲೀಕ ಪ್ರದೀಪ್ ಎಲ್ಲನಕರ್ ಮಾತನಾಡಿ, ರಕ್ತದಾನ ಮಹದಾನ. ಪ್ರಕೃತಿಯಲ್ಲಿ ಏನನ್ನಾದರೂ ಉತ್ಪಾದನೆ ಮಾಡಬಹುದು. ಆದರೆ ರಕ್ತವನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ರಕ್ತದಾನ ಆರೋಗ್ಯವನ್ನು ಕಾಪಾಡುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಟಿ. ಭಟ್ ಮಾತನಾಡಿ, ಶಿರಸಿಯಲ್ಲಿ ಅನೇಕ ಶತ ಪ್ರಯತ್ನಗಳ ನಂತರ ಬ್ಲಡ್ ಬ್ಯಾಂಕ್ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಅನೇಕರು ರಕ್ತದಾನ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರದೀಪ್ ಜ್ಯುವೆಲರ್ಸ್ ಸಿಂಪಿಗಲ್ಲಿ ಮಾಲೀಕ ಪ್ರದೀಪ್ ಎಲ್ಲನಕರ್ ಬೆಳ್ಳಿ ನಾಣ್ಯ ನೀಡುವ ಮೂಲಕ ಸನ್ಮಾನಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿನಾಯಕ ಭಾಗವತ್, ಮಹಾವಿದ್ಯಾಲಯದ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ನಿರೂಪಿಸಿದರು.
ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸ ವಶಭಟ್ಕಳ: ನಗರದ ಆಸರಕೇರಿಯ ಕೆರೆಗದ್ದೆ ಮಹಾಸತಿ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ ಪ್ಯಾಸೆಂಜರ್ ಅಟೋ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಗೋಮಾಂಸ ಸಹಿತ ಅಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿರುವ ಸುಳಿವು ಸಿಕ್ಕ ಆರೋಪಿಯು ರಿಕ್ಷಾದಲ್ಲಿಯೇ ಗೋಮಾಂಸವನ್ನು ಬಿಟ್ಟು ಪರಾರಿಯಾಗಿದ್ದಾನೆ. ಆರೋಪಿಗಳನ್ನು ನಗರದ ನಿವಾಸಿ ಎ.ಡಿ. ಅಶ್ಪಾಕ್, ಮುಗಳಿಹೊಂಡದ ನಿವಾಸಿ ಶಾಹೀದ್ ಹಾಗೂ ಗುಳ್ಮಿ ನಿವಾಸಿ ಶಾಕೀರ ಮಹಮ್ಮದ್ ಗೌಸ್ ಎಂದು ಗುರುತಿಸಲಾಗಿದೆ.ವಶಪಡಿಸಿಕೊಂಡಿರುವ ಗೋಮಾಂಸದ ಮೌಲ್ಯ ₹೬೭ ಸಾವಿರ ಎಂದು ಅಂದಾಜಿಸಲಾಗಿದೆ. ೧೬೮ ಕೆಜಿ ಗೋಮಾಂಸವನ್ನು ೫ ಸಿಮೆಂಟ್ ಚೀಲಗಳಲ್ಲಿ ತುಂಬಿಕೊಂಡು ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುವಾಗ ಸುಳಿವು ಸಿಕ್ಕ ಪೊಲೀಸರು ದಾಳಿ ಮಾಡುತ್ತಿರುವಂತೆಯೇ ಆರೋಪಿತರು ಅಟೋ ರಿಕ್ಷಾವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.