ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ ಒಂದು ವಾರದ ಯಕ್ಷಗಾನ ತರಬೇತಿ ಸನಿವಾಸ ಶಿಬಿರದ ಸಮಾರೋಪ ಸಮಾರಂಭವು ಶನಿವಾರ ನಡೆಯಿತು.ಉಡುಪಿ ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ. ಮಾತನಾಡಿ, ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದರು.ಮಕ್ಕಳನ್ನು ಕೇವಲ ಪಠ್ಯ ಶಿಕ್ಷಣಕ್ಕಷ್ಟೇ ಸೀಮಿತಗೊಳಿಸದೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವಂತೆ ಮಾಡಿ ಅವರ ಆತ್ಮ ವಿಶ್ವಾಸ, ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಪಾಲಕರಿಗೆ ಕರೆಕೊಟ್ಟರು.ಪ್ರಮಾಣಪತ್ರ ವಿತರಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಮಣೂರು ವರಿಷ್ಠ ಆನಂದ ಸಿ. ಕುಂದರ್, ಯಕ್ಷಗಾನ ಕಲಾರಂಗ ಕಲೆ, ಸಮಾಜಪರ ಕೆಲಸಗಳನ್ನು ಮಾಡುತ್ತಾ ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದ ಪ್ರತಿಷ್ಠಿತ ಸಂಸ್ಥೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಶುಭಕೋರಿದರು. ಅಭ್ಯಾಗತರಾಗಿ ಸಮಾಜ ಸೇವಕ ಯು. ವಿಶ್ವನಾಥ ಶೆಣೈ, ಗಣ್ಯರಾದ ಡಾ. ಜಗದೀಶ ಶೆಟ್ಟಿ ಸಿದ್ದಾಪುರ, ಜಯ ಸಿ. ಕೋಟ್ಯಾನ್, ಸುಧೀರ್ ಕುಮಾರ್ ಶೆಟ್ಟಿ ಬ್ರಹ್ಮಾವರ, ಡಾ. ಪ್ರಶಾಂತ್ ಶೆಟ್ಟಿ ಮಣಿಪಾಲ, ಶ್ರೀನಿವಾಸ ರಾವ್ ಹಿರಿಯಡಕ, ಶಿಬಿರದ ಪ್ರಾಯೋಜಕತ್ವವಹಿಸಿದ ಭೀಮ ಗೋಲ್ಡ್‌ನ ಗುರುಪ್ರಸಾದ್ ಮತ್ತು ರಾಘವೇಂದ್ರ ಭಟ್ ಭಾಗವಹಿಸಿದ್ದರು.ಈ ಸಂದರ್ಭ ಶಿಬಿರದ ನಿರ್ದೇಶಕ ಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಶಿಬಿರದ ಶಿಕ್ಷಕರಾದ ನರಸಿಂಹ ತುಂಗ, ಆದ್ಯತಾ ಭಟ್ ಮತ್ತು ತರಬೇತಿಯಲ್ಲಿ ಸಹಕರಿಸಿದ ಸಂಜೀವ ಸುವರ್ಣರ ಶಿಷ್ಯ ವರ್ಗವನ್ನು ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ಅಭ್ಯಾಗತರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಗುಂಪು ಛಾಯಾಚಿತ್ರ, ಪುಸ್ತಕಗಳನ್ನು ನೀಡಿದರು. ಶಿಬಿರದಲ್ಲಿ ನಡೆಸಿದ ಸ್ಪರ್ಧಾ ವಿಜೇತರಿಗೆ ಯು.ಎಸ್. ರಾಜಗೋಪಾಲ ಆಚಾರ್ಯರು ಬಹುಮಾನ ವಿತರಿಸಿದರು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್ ಹಾಗೂ ಸದಸ್ಯರಾದ ಸಂತೋಷ್ ಶೆಟ್ಟಿ, ವಿಜಯಕುಮಾರ್ ಮುದ್ರಾಡಿ, ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವಿಸಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಶಿಬಿರದಲ್ಲಿ ಪಾಲ್ಗೊಂಡ ೬೦ ವಿದ್ಯಾರ್ಥಿಗಳು ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಸುಂದರವಾಗಿ ಪ್ರಸ್ತುತಿಪಡಿಸಿದರು.