ಶಿಸ್ತು, ಸೇವಾ ಮನೋಭಾವವಿರುವ ವಿದ್ಯಾರ್ಥಿ ಸಾಧಕರಾಗೋದು: ಶಾಸಕ ಎಚ್.ಟಿ.ಮಂಜು

| Published : May 17 2025, 01:40 AM IST

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕ ಗಳಿಕೆ ಬದುಕಿನ ಮಾನದಂಡವಲ್ಲ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ವಿಫುಲ ಅವಕಾಶಗಳಿವೆ. ಪ್ರತಿಭೆ ಇದ್ದವರು ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿ ಬದುಕು ಕಟ್ಟಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜೀವನದಲ್ಲಿ ಶಿಸ್ತು, ಸಂಯಮ, ವಿನಯವಂತಿಕೆ ಹಾಗೂ ಸೇವಾ ಮನೋಭಾವನೆ ರೂಢಿಸಿಕೊಂಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧಕರಾಗಿ ಬೆಳೆಯುತ್ತಾರೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್ ಸಮಿತಿಗಳ ವಾರ್ಷಿಕ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವರದಾನ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವವು ಸಮಗ್ರವಾಗಿ ವಿಕಸನಗೊಳ್ಳುತ್ತದೆ ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕ ಗಳಿಕೆ ಬದುಕಿನ ಮಾನದಂಡವಲ್ಲ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ವಿಫುಲ ಅವಕಾಶಗಳಿವೆ. ಪ್ರತಿಭೆ ಇದ್ದವರು ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶಗಳಿವೆ. ವಿದ್ಯಾರ್ಥಿನಿಯರು ತಮ್ಮ ಸುಪ್ತ ಪ್ರತಿಭೆ ಅನಾವರಣಗೊಳಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡು ಯಶಸ್ಸಿನ ದಾರಿಯಲ್ಲಿ ಸಾಗುವಂತೆ ಕಿವಿಮಾತು ಹೇಳಿದರು.

ಪ್ರಾಂಶುಪಾಲೆ ಡಾ.ಕೆ.ಪಿ.ಪ್ರತಿಮಾ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಮತ್ತು ಸಹಪಾಠಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆಯನ್ನು ಪ್ರಶಂಸಿಸಿದರು.

ಕಾಮಿಡಿ ಕಿಲಾಡಿ ಕೋಳಿ ಕಳ್ಳ ಖ್ಯಾತಿಯ ಹಾಸ್ಯನಟ ಮನೋಹರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮನೋರಂಜನೆ ಜೊತೆಗೆ ಸೊಗಸಾದ ಸಂದೇಶ ನೀಡಿ ಗಮನ ಸೆಳೆದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ವಿನಯ್ ಕುಮಾರ್ ಮಾತನಾಡಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಕೃಷ್ಣಮೂರ್ತಿ ಎನ್.ಟಿ.ದಿನೇಶ್, ಎಂ.ವಿ. ಮಹದೇವ, ಆದರ್ಶ.ಕೆ.ಎನ್, ಚೇತನ್ ಕುಮಾರ್, ಕಿರಣ್ ಎಸ್, ನಪೀಸ ನಾಯಕವಾಡಿ, ವಿನೋದ್, ಪುಟ್ಟಮಾದಪ್ಪ, ಶ್ಯಾಮ್, ಚಂದ್ರು, ನಾಗೇಶ್ ಉಪಸ್ಥಿತರಿದ್ದರು.