ತಾಲೂಕಿನಲ್ಲಿ 71 ಕಿರಿಯ ಪ್ರಾಥಮಿಕ, 75 ಹಿರಿಯ ಪ್ರಾಥಮಿಕ ಶಾಲೆ, 11 ಪ್ರೌಢಶಾಲೆಗಳು ಒಟ್ಟು 157 ಶಾಲೆಗಳಿವೆ. ಇದರಲ್ಲಿ 1ರಿಂದ 10ನೇ ತರಗತಿಯವರೆಗೆ ಅಭ್ಯಸಿಸುವ ಎಲ್ಲ 6677 ವಿದ್ಯಾರ್ಥಿಗಳಿಗೆ ಶೂ ವಿತರಣೆಯಾಗಬೇಕಿದೆ.
ರಾಘು ಕಾಕರಮಠ
ಅಂಕೋಲಾ: ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಬೇಕಾಗಿದ್ದ ಉಚಿತ ಶೂಗಳು ಇನ್ನೂ ಮಕ್ಕಳ ಕೈ ಸೇರದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರದ ಶೂ ಭಾಗ್ಯ ಈ ವರ್ಷ ಸಿಗಲಿದೆಯೇ ಎಂಬ ಗೊಂದಲ ಪೋಷಕರನ್ನು ಕಾಡುವಂತಾಗಿದೆ.ತಾಲೂಕಿನಲ್ಲಿ 71 ಕಿರಿಯ ಪ್ರಾಥಮಿಕ, 75 ಹಿರಿಯ ಪ್ರಾಥಮಿಕ ಶಾಲೆ, 11 ಪ್ರೌಢಶಾಲೆಗಳು ಒಟ್ಟು 157 ಶಾಲೆಗಳಿವೆ. ಇದರಲ್ಲಿ 1ರಿಂದ 10ನೇ ತರಗತಿಯವರೆಗೆ ಅಭ್ಯಸಿಸುವ ಎಲ್ಲ 6677 ವಿದ್ಯಾರ್ಥಿಗಳಿಗೆ ಶೂ ವಿತರಣೆಯಾಗಬೇಕಿದೆ.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸಮವಸ್ತ್ರದ ಜತೆಗೆ ಉಚಿತವಾಗಿ ಪಾದರಕ್ಷೆಗಳನ್ನು ವಿತರಿಸುವ ಯೋಜನೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಅನುಕೂಲವಾಗುತ್ತಿತ್ತು. ಕಳೆದ ಸಾಲಿನಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್ಡಿಎಂಸಿ) ಸಹಯೋಗದಲ್ಲಿ ಸ್ಥಳೀಯವಾಗಿ ಶೂಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ವಿತರಕರು ಶಾಲೆಗಳಿಗೆ ತೆರಳಿ ಆಯಾ ತರಗತಿಯ ವಿದ್ಯಾರ್ಥಿಗಳ ಪಾದದ ಅಳತೆಗೆ ಅನುಗುಣವಾಗಿ ಶೂಗಳನ್ನು ವಿತರಿಸುತ್ತಿದ್ದರು.ಆದರೆ ಈ ಬಾರಿ ಸರ್ಕಾರವೇ ಟೆಂಡರ್ ಮೂಲಕ ಶೂ ವಿತರಣೆಗೆ ಕ್ರಮ ಕೈಗೊಂಡಿದೆ. ಈಗಾಗಲೇ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆಯನ್ನು ಪಡೆದು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಸುಮಾರು ಎರಡು ತಿಂಗಳು ಕಳೆದಿದೆ. ಆದರೂ ಇದೂವರೆಗೆ ವಿದ್ಯಾರ್ಥಿಗಳಿಗೆ ಶೂ ವಿತರಣೆ ಕಾರ್ಯ ನಡೆದಿಲ್ಲ.
ಶೂ ವಿತರಣೆ ವಿಳಂಬವಾಗಿರುವುದರಿಂದ ಕೆಲವು ಬಡ ಕುಟುಂಬಗಳ ಮಕ್ಕಳು ಪಾದರಕ್ಷೆಗಳಿಲ್ಲದೆ ಶಾಲೆಗೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮವಸ್ತ್ರದೊಂದಿಗೆ ಶಿಸ್ತಿನಿಂದ ಮಕ್ಕಳು ಶಾಲೆಗೆ ತೆರಳಬೇಕು ಎಂಬ ಉದ್ದೇಶದಿಂದ ಕೆಲವು ಪೋಷಕರು ತಮ್ಮ ಸ್ವಂತ ಹಣದಲ್ಲಿ ಪಾದರಕ್ಷೆಗಳನ್ನು ಖರೀದಿಸಿ ಮಕ್ಕಳಿಗೆ ನೀಡಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚುವರಿ ವೆಚ್ಚ ಭರಿಸುವುದು ಕಷ್ಟಕರವಾಗಿದೆ.ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಮವಸ್ತ್ರ ಹಾಗೂ ಪಾದರಕ್ಷೆಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮೂರು ತಿಂಗಳು ಕಳೆದರೂ ಶೂ ವಿತರಣೆ ಆಗದಿರುವುದು ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪಾಲಕರಲ್ಲಿ ಪ್ರಶ್ನೆ ಮೂಡಿಸಿದೆ.
ಪೋಷಕರ ಆಗ್ರಹ: ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ಪಡೆದು ಸರ್ಕಾರಕ್ಕೆ ಕಳುಹಿಸಿರುವ ಹಿನ್ನೆಲೆ ಕೂಡಲೇ ಶೂ ವಿತರಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು. ಬಡ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪಾದರಕ್ಷೆಗಳ ಕೊರತೆಯಾಗದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.ಭರವಸೆ: ಈ ವರ್ಷದಿಂದ ಸರ್ಕಾರವೇ ಮಕ್ಕಳಿಗೆ ಶೂ ವಿತರಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆಗಳನ್ನು ಕಳುಹಿಸಿಕೊಡಲಾಗಿದೆ. ಸದ್ಯದಲ್ಲಿಯೇ ಶೂಗಳನ್ನು ವಿತರಣೆಯಾಗುವ ಭರವಸೆ ಇದೆ ಎಂದು ಬಿಆರ್‌ಪಿ ವಿನುತಾಕುಮಾರಿ ನಾಯಕ ತಿಳಿಸಿದರು.
ಉಲ್ಲಂಘನೆ: ಶಾಲೆಗಳು ಆರಂಭವಾಗಿ ಮೂರು ತಿಂಗಳು ಆಗುತ್ತಿದ್ದರೂ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕಿದ್ದ ಶೂಗಳನ್ನು ಇದೂವರೆಗೂ ನೀಡಿಲ್ಲ. ಕೆಲವು ಬಡ ಮಕ್ಕಳು ಚಪ್ಪಲಿಗಳನ್ನೂ ಬಳಸದೇ ತರಗತಿಗಳಿಗೆ ಹಾಜರಾಗುತ್ತಿರುವುದರಿಂದ ಸಮವಸ್ತ್ರನೀತಿ ಉಲ್ಲಂಘನೆಯಾಗುವಂತಾಗಿದೆ. ಸರ್ಕಾರ ಶೀಘ್ರವಾಗಿ ಶೂಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರ್ಸಾದ ಶಿಕ್ಷಣಪ್ರೇಮಿ ಗಣಪತಿ ನಾಯ್ಕ ತಿಳಿಸಿದರು.