ಸಾರಾಂಶ
ಕೊಪ್ಪಳ ಬಳಿ ಬಲ್ಡೋಟಾ ಕಾರ್ಖಾನೆ ಸ್ಥಾಪಿಸುವ ಸಂಬಂಧ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಕಳೆದ ಬಾರಿ ಪ್ರಶ್ನಿಸಿದಾಗಲೂ ನೀಡಿದ್ದ ಉತ್ತರವನ್ನೆ ಸಚಿವರು ಈಗಲೂ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಕೊಪ್ಪಳ:
ಕೊಪ್ಪಳ ಬಳಿ ಬಲ್ಡೋಟಾ ಕಾರ್ಖಾನೆ ಸ್ಥಾಪಿಸುವ ಕುರಿತು ಈಗಾಗಲೇ ಕೈಗಾರಿಕೆಗಳ ತಜ್ಞರ ಸಮಿತಿ ಅಧ್ಯಯನ ಮಾಡಿ ವರದಿ ನೀಡಿದ್ದು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೂಲಕವೂ ಅಧ್ಯಯನ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.ವಿಧಾನ ಪರಿಷತ್‌ನಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಕಳೆದ ಅಧಿವೇಶನದಲ್ಲಿ ನೀಡಿದ ಉತ್ತರವನ್ನೇ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬಲ್ಡೋಟಾ ಕಂಪನಿಯ ಎಂಎಸ್‌ಪಿಎಲ್ ಸೇರಿದಂತೆ ಕೈಗಾರಿಕೆಗಳಿಂದ ಮಾಲಿನ್ಯವಾಗುತ್ತಿರುವ ಕುರಿತು ಅಧ್ಯಯನ ನಡೆಸಲು ಡಿ. 11, 2024 ಮತ್ತು ಡಿ. 12, 2024ರಂದು ಕೊಪ್ಪಳ ತಾಲೂಕಿನಲ್ಲಿರುವ ವಿವಿಧ ಕೈಗಾರಿಕೆಗಳನ್ನು ತಜ್ಞರ ಸಮಿತಿ ವೀಕ್ಷಿಸಿದ್ದು, ಈ ಸಮಿತಿ ನೀಡಿರುವ ವರದಿಯನ್ನು ನೀಡಿದ್ದೇವೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಎಂಒಇಎಫ್ ಮತ್ತು ಸಿಸಿ ತಜ್ಞರ ಸಮಿತಿ ಸಲ್ಲಿಸಿರುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ. ಈ ವರದಿ ಆಧರಿಸಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇದಲ್ಲದೆಯೂ ಭಾರತೀಯ ವಿಜ್ಞಾನ ಸಂಸ್ಥೆ ಮೂಲಕ ಪ್ರತ್ಯೇಕವಾಗಿ ಅಧ್ಯಯನ ಮಾಡುವ ಕುರಿತು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಕಾರ್ಖಾನೆ ಸ್ಥಾಪನೆ ಕುರಿತು ಸರ್ಕಾರದ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.ಕೊಪ್ಪಳ ಬಳಿ ಬಲ್ಡೋಟಾ ಕಾರ್ಖಾನೆ ಸ್ಥಾಪಿಸುವ ಸಂಬಂಧ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಕಳೆದ ಬಾರಿ ಪ್ರಶ್ನಿಸಿದಾಗಲೂ ನೀಡಿದ್ದ ಉತ್ತರವನ್ನೆ ಸಚಿವರು ಈಗಲೂ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.