ಸಾರಾಂಶ
ವಿದ್ಯಾರ್ಥಿಗಳಲ್ಲಿ ವಿದ್ಯೆ ಜೊತೆಗೆ ವಿನಯವು ಅತಿ ಮುಖ್ಯ. ಆತ್ಮಸ್ಥೈರ್ಯ ಹಾಗೂ ಛಲದೊಂದಿಗೆ ನಿಮ್ಮ ವಿದ್ಯಾರ್ಥಿ ಜೀವನ ಯಶಸ್ವಿ ಮುಖ್ಯವಾಗುತ್ತದೆ. ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡುವುದು ಪಾಲಕರ ಕರ್ತವ್ಯವಾಗಿದೆ. ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ವಿ ಮತ್ತು ಸಾಧನೆ ಕಟ್ಟಿಟ್ಟ ಬುತ್ತಿಯಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯಾರ್ಥಿಗಳು ಪ್ರತಿನಿತ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಸಂಶೋಧನೆ ಮತ್ತು ಅನ್ವೇಷಣೆಗಳ ಕುರಿತು ಹೆಚ್ಚು ಅಧ್ಯಯನ ನಡೆಸುವವ ಜೊತೆಗೆ ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಂಡ್ಯ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಟಿ.ರಾಜು ಹೇಳಿದರು.ತಾಲೂಕಿನ ಬೆಸಗರಹಳ್ಳಿ ಮಾನಸ ವಿದ್ಯಾ ಸಂಸ್ಥೆಯಿಂದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ 18 ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಶಿಕ್ಷಣ ಹರಿಯುವ ನೀರಿನಂತೆ ನಿತ್ಯ ನೂತನ ಆಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಬೇಕಿರುವುದು ಅಚಲ ವಿಶ್ವಾಸ ಮತ್ತು ದೃಢನಂಬಿಕೆ ಎಂದರು.
ವಿದ್ಯಾರ್ಥಿಗಳಲ್ಲಿ ವಿದ್ಯೆ ಜೊತೆಗೆ ವಿನಯವು ಅತಿ ಮುಖ್ಯ. ಆತ್ಮಸ್ಥೈರ್ಯ ಹಾಗೂ ಛಲದೊಂದಿಗೆ ನಿಮ್ಮ ವಿದ್ಯಾರ್ಥಿ ಜೀವನ ಯಶಸ್ವಿ ಮುಖ್ಯವಾಗುತ್ತದೆ. ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡುವುದು ಪಾಲಕರ ಕರ್ತವ್ಯವಾಗಿದೆ. ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ವಿ ಮತ್ತು ಸಾಧನೆ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಮಾನಸ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವಿ.ಕೆ .ಜಗದೀಶ್ ಮಾತನಾಡಿ, ತಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದು ವೈದ್ಯಕೀಯ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ತಲಾ ಒಂದು ಲಕ್ಷ ರು. ಆರ್ಥಿಕ ನೆರವು ಹಾಗೂ ಹಿಂದುಳಿದ ಮಕ್ಕಳ ಪೂರ್ಣ ಪ್ರಮಾಣದ ವೈದ್ಯಕೀಯ ವಿದ್ಯಾಭ್ಯಾಸದ ವೆಚ್ಚವನ್ನು ಸಂಸ್ಥೆಯಿಂದ ಭರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರವೀಣ್ ಕುಮಾರ್. ಸಂಸ್ಥೆಯ ನಿರ್ದೇಶಕರಾದ ಸನತ್ ಕುಮಾರ್, ಮುಖ್ಯ ಶಿಕ್ಷಕರಾದ ರಮೇಶ್, ಶರತ್, ಪಲ್ಲವಿ ಮತ್ತು ಕುಮಾರ್ ಪಾಲ್ಗೊಂಡಿದ್ದರು.