ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ತಜ್ಞರ ಅಧ್ಯಯನ

| Published : Aug 01 2025, 11:45 PM IST

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ತಜ್ಞರ ಅಧ್ಯಯನ
Share this Article
  • FB
  • TW
  • Linkdin
  • Email

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಿಂದಾಗುತ್ತಿರುವ ಪರಿಸರ ಮಾಲಿನ್ಯ ಹಾಗೂ ಜನ- ಜಲ ಜೀವನದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದ ಪರಿಸರ ತಜ್ಞರ ಮೂಲಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಯತ್ನಿಸಲಾಗುವುದು

ಆನಂದ್‌ ಎಂ.ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳಿಂದಾಗುತ್ತಿರುವ ಪರಿಸರ ಮಾಲಿನ್ಯ ಹಾಗೂ ಜನ- ಜಲ ಜೀವನದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದ ಪರಿಸರ ತಜ್ಞರ ಮೂಲಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಯತ್ನಿಸಲಾಗುವುದು ಎಂದು ಜನಸಂಗ್ರಾಮ ಪರಿಷತ್‌ ಮುಂದಾಗಿದೆ.

ರಾಯಚೂರು-ಯಾದಗಿರಿ ಮಧ್ಯೆದ ಈ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ರಾಸಾಯನಿಕ ಫಾರ್ಮಾ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಗಾಳಿ ಹಾಗೂ ದುರ್ನಾತದಿಂದಾಗಿ, ಭವಿಷ್ಯದ ಪೀಳಿಗೆಯ ಮೇಲೆ ಆಪತ್ತು ಕಾದಿದೆ ಎಂದು ‘ಕನ್ನಡಪ್ರಭ’ದೊಡನೆ ಮಾತನಾಡಿದ ಜನಸಂಗ್ರಾಮ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ರಾಯಚೂರಿನ ರಾಘವೇಂದ್ರ ಕುಷ್ಟಗಿ, ಕಡೇಚೂರು ಬಾಡಿಯಾಳ ಭಾಗದ ಹತ್ತಾರು ಹಳ್ಳಿಗಳ ಜನರ ಹೋರಾಟಕ್ಕೆ ಹೆಜ್ಜೆ ಹಾಕುವ ಜನಸಂಗ್ರಾಮ ಪರಿಷತ್‌, ಕಾನೂನಾತ್ಮಕ ಹೋರಾಟಗಳ ಮೂಲಕ ದನಿಯಾಗಲಿದೆ ಎಂದು ಹೇಳಿದರು.

ಬಳ್ಳಾರಿ ಅಕ್ರಮ ಗಣಿಗಾರಿಕೆ ಸೇರಿದಂತೆ, ವಿವಿಧ ಪರಿಸರ ಹೋರಾಟಗಳಲ್ಲಿ ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ತಂಡದಲ್ಲಿರುವ ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್‌ ಮೂಲಕ ಬಳ್ಳಾರಿ ಜಿಲ್ಲೆಯ ಸಂಡೂರಿನ ವಿವಿಧೆಡೆ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿನ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಜನರ ಜೀವನದ ದುಸ್ಥಿತಿ ಕುರಿತು ‘ಕನ್ನಡಪ್ರಭ’ ಸರಣಿ ವರದಿಗಳನ್ನು ಗಮನಿಸುತ್ತಿರುವ ಕುಷ್ಟಗಿ, ಜನಪರ ಕಾಳಜಿಯುಳ್ಳ ಈ ವರದಿಗಳು ಅಲ್ಲಿನ ಕಟುವಾಸ್ತವವನ್ನು ಬಹಿರಂಗವಾಗಿಸಿವೆ. ಬಳ್ಳಾರಿ ಗಣಿಗಾರಿಕೆ ತಡೆಯವ ನಿಟ್ಟಿನಲ್ಲಿ ನಡೆ ಹೋರಾಟದಂತೆ, ಇಲ್ಲಿಯೂ ಸಹ ಅಂತಾರಾಷ್ಟ್ರೀಯ ಮಟ್ಟದ ಪರಿಸರವಾದಿಗಳು, ತಜ್ಞರನ್ನು ಆಹ್ವಾನಿಸಿ ಅಧ್ಯಯನದ ಚಿಂತನೆ ನಡೆಸಿದ್ದೇವೆ ಎಂದರು.

ದೇಶದ ವಿವಿಧೆಡೆ ಕೈಗಾರಿಕೆಗಳಿಂದ ಪರಿಸರದ ಮೇಲೆ ಅಡ್ಡಪರಿಣಾಮಗಳ ಸಂದರ್ಭದಲ್ಲಿ ಇಂತಹದ್ದೊಂದು ಅಧ್ಯಯನದ ಮೂಲಕ, ಸರ್ಕಾರದ ಕಣ್ತೆರೆಸಿ, ಜನಾಂದೋಲನ ರೂಪಿಸಲು ಕಾರಣವಾಗಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ತಜ್ಞರ ತಂಡವೊಂದನ್ನು ಕಡೇಚೂರು ಬಾಡಿಯಾಳ ಪ್ರದೇಶಕ್ಕೆ ಕರೆತರಲು ಮಾತುಕತೆ ನಡೆಸಿದ್ದೇವೆ. ಈ ಮೂಲಕ ಕಾನೂನಾತ್ಮಕ ದಾಖಲೆಗಳನ್ನೂ ಸಂಗ್ರಹಿಸಿ, ಕೈಗಾರಿಕೆಗಳ ಅಟ್ಟಹಾಸಕ್ಕೆ ಕೊನೆಹಾಡುವ ಪ್ರಯತ್ನ ಮಾಡುತ್ತೇವೆ. ರಾಘವೇಂದ್ರ ಕುಷ್ಟಗಿ, ಸಂಸ್ಥಾಪಕರ ಅಧ್ಯಕ್ಷ, ಜನಸಂಗ್ರಾಮ ಪರಿಷತ್‌, ರಾಯಚೂರು.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಶ್ವಾಸಕೋಶದ ಸಮಸ್ಯೆ ಜತೆಗೆ ಚರ್ಮ, ಕಣ್ಣು, ಹೃದಯ ಸಮಸ್ಯೆಗಳು ಕಾಡುತ್ತಿವೆ. ಸರ್ಕಾರದಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ನಮ್ಮ ಭಾಗದ ಮಠಾಧೀಶರು, ಪರಿಸರವಾದಿಗಳು, ಕನ್ನಡಪರ ಸಂಘಟನೆಗಳು, ಬುದ್ಧಿಜೀವಿಗಳು ಒಟ್ಟಾಗಿ ಒಂದೇ ವೇದಿಕೆಯ ಮುಖಾಂತರ ಜನಜಾಗೃತಿ ಮಾಡುವ ಮೂಲಕ ಹೋರಾಟ ಮಾಡಬೇಕು. : ಅನಿಲಗೌಡ ಬಾಡಿಯಾಳ, ಅಧ್ಯಕ್ಷ, ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇದಿಕೆ.

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ನಾವು ಕೃಷಿ ಜಮೀನುನ್ನು ನೀಡಿದ್ದೇವೆ. ಇದಕ್ಕೆ ಪ್ರತಿಫಲವಾಗಿ ಇಂದು ನಮಗೆ ದುರ್ನಾತ ಸೇವನೆ ಮಾಡಿ ಎಂದು ಸರ್ಕಾರ ರಾಸಾಯನಿಕ ಕಂಪನಿಗಳನ್ನು ಕೊಡುಗೆಯಾಗಿ ನೀಡಿದೆ. ಅನೇಕರು ಗ್ರಾಮಗಳನ್ನು ತೊರೆದು ಪಟ್ಟಣಗಳಿಗೆ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಸ್ಮಶಾನಮೌನಕ್ಕೆ ಸಾಕ್ಷಿಯಾಗಲಿದೆ ಎಂಬ ಆತಂಕ ಉಂಡಾಗಿದೆ. ಓಟು ಹಾಕಲು ಮಾತ್ರ ಜನರು ಬೇಕು, ನಂತರ ಸರ್ಕಾರಕ್ಕೆ ಉದ್ಯಮಿಗಳ ಗೆಳತನ ಬೇಕಾಗಿದೆ. ಇದರಿಂದ ಇಲ್ಲಿನ ಮುಗ್ಧ ಬಡ ಜನರ ಪ್ರಾಣ ಹಿಂಡುತ್ತಿದೆ.

ಸುರೇಶ ಪಾಟೀಲ್, ಶೆಟ್ಟಿಹಳ್ಳಿ