ಪರಿಶ್ರಮದಿಂದ ವ್ಯಾಸಂಗ ಮಾಡಿ, ಸಾಧನೆ ಶಿಖರ ಏರಿ: ಮೇಘರಾಜ ಮಾಳಗಿಮನಿ

| Published : Aug 27 2025, 01:02 AM IST

ಸಾರಾಂಶ

ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಮತ್ತಷ್ಟು ಸಾಧನೆಗೆ ಉತ್ಸಾಹ ಸಿಗುವ ಜತೆಗೆ ಇತರರಿಗೆ ಸಾಧನೆಗೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ.

ಹಿರೇಕೆರೂರು: ವಿದ್ಯಾರ್ಥಿಗಳು ಉನ್ನತ ಕನಸಗಳನ್ನು ಕಟ್ಟಿಕೊಂಡು ಪರಿಶ್ರಮದಿಂದ ವ್ಯಾಸಂಗ ಮಾಡಿ ಸಾಧನೆ ಶಿಖರ ಏರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮೇಘರಾಜ ಮಾಳಗಿಮನಿ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಹಿರೇಕೆರೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2024-25ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಮತ್ತಷ್ಟು ಸಾಧನೆಗೆ ಉತ್ಸಾಹ ಸಿಗುವ ಜತೆಗೆ ಇತರರಿಗೆ ಸಾಧನೆಗೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ನೂತನ ಪದಾಧಿಕಾರಿಗಳ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಪುಟ್ಟಪ್ಪಗೌಡ್ರ, ಭಾರತ ಜ್ಞಾನ ವಿಜ್ಞಾನ ಸಮಿತಿಯ ನೂತನ ಪದಾಧಿಕಾರಿಗಳು ಸಮಿತಿಯ ಎಲ್ಲ ಕಾರ್ಯಚಟುವಟಿಯಲ್ಲಿ ಸಕ್ರಿಯವಾಗಿದ್ದುಕೊಂಡು ಅದರ ಉದ್ದೇಶ ಈಡೇರಿಸುವ ಕಾರ್ಯ ಮಾಡಬೇಕು ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕಿ ರೇಣುಕಾ ಗುಡಿಮನಿ ಮಾತನಾಡಿ, ಸಮಿತಿಯಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಇಂದಿನ ಯುವ ಪೀಳಿಗೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು, ಬಾಹ್ಯಕಾಶ ವೀಕ್ಷಣೆ, ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವಿಕೆ, ಪ್ರತಿ ತಿಂಗಳು ಬಿಡುಗಡೆಯಾಗುವ ಟೀಚರ್ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಸ್ವರಚಿತ ಕವನಗಳು, ಕಥೆ ಹೇಳುವುದು, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಯೋಗಗಳನ್ನು ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಕಾರ್ಯ ಮಾಡಲಾಗುತ್ತದೆ ಎಂದರು.

ತಾಲೂಕಿನ ವಿವಿಧ ಪ್ರೌಢಶಾಲೆಗಳು 27 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಭಾರತ ತಾಲೂಕು ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಎನ್. ಸುರೇಶಕುಮಾರ, ಅಧ್ಯಕ್ಷ ಪಿ.ಎಸ್. ಸಾಲಿ, ಉಪಾಧ್ಯಕ್ಷ ಬಸವನಗೌಡ ಬಣಕಾರ, ಕಾರ್ಯದರ್ಶಿ ನಾಗರಾಜ ಪುರದ, ಖಜಾಂಚಿ ಎಂ.ಎಂ. ಮತ್ತೂರ, ಸದಸ್ಯರಾದ ರಾಘವೇಂದ್ರ ಹಂಚಿನಮನಿ, ಎನ್.ಎಸ್. ಹೆಗ್ಗೇರಿ, ಪುಟ್ಟಪ್ಪಗೌಡ್ರ, ಜೆ.ಬಿ. ಜೋಗಿಹಳ್ಳಿ, ಕುಮಾರ ಮಡಿವಾಳರ, ತನುಜಾ ಚಂದ್ರೀಕೆರ, ಜೆ.ವಿ. ಹೆಗ್ಗೇರಿ, ಗೀತಾ ಸಾಲಿಮಠ, ಪ್ರಕಾಶ್ ಆರಿಕಟ್ಟಿ, ಎಂ.ಎ. ಮುಲ್ಲಾ ಅವರನ್ನು ಅಭಿನಂದಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಚೇರ್‌ಮನ್‌ ಎಂ.ಬಿ. ಹಾದಿಮನಿ. ರಟ್ಟೀಹಳ್ಳಿ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಮಹೇಶ ಮೆಣಸಗಿ, ಗೌರವಾಧ್ಯಕ್ಷ ರಾಘವೇಂದ್ರ ಅಗಸಿಬಾಗಿಲ, ರತ್ನಮ್ಮ ಜೋಗಿಹಳ್ಳಿ, ಲಲಿತಾ ಗೊಗ್ಗದ, ಬಿ.ಟಿ. ಚಿಂದಿ, ಬಸವರಾಜ ಪೂಜಾರ, ಪಿ.ಬಿ. ನಿಂಗನಗೌಡ್ರ, ರಾಮಣ್ಣ ತೆಂಬದ, ಚಿಕ್ಕನರಗುಂದಮಠ ಇದ್ದರು.