ಸಾರಾಂಶ
ಅಧ್ಯಯನ ಪ್ರವಾಸದ ಭಾಗವಾಗಿ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳು ಗುರುವಾರ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಕ್ಷೇತ್ರದ ಕುರಿತು ಸವಿವರ ಮಾಹಿತಿ ಪಡೆದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳು ಅಧ್ಯಯನ ಪ್ರವಾಸದ ಭಾಗವಾಗಿ ಗುರುವಾರ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದರು. ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಶಿಸ್ತುಬದ್ಧವಾಗಿ ನಡೆಯುತ್ತಿರುವ ಬಹುಮುಖಿ ಸೇವಾಚಟುವಟಿಕೆಗಳನ್ನು ವೀಕ್ಷಿಸಿದರು. ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಮಾರ್ಗದರ್ಶನ ಪಡೆದರು.ಇತ್ತೀಚೆಗೆ ಭಾರತದ ಉಪರಾಷ್ಟ್ರಪತಿ ಉದ್ಘಾಟಿಸಿದ ದೇವರ ದರ್ಶನಕ್ಕಾಗಿ ಸರತಿ ಸಾಲಿನ ವ್ಯವಸ್ಥೆಯ ‘ಶ್ರೀ ಸಾನ್ನಿಧ್ಯ’ ವೀಕ್ಷಿಸಿದರು.
‘ಅನ್ನಪೂರ್ಣ’ ಭೋಜನಾಲಯದಲ್ಲಿ ಪ್ರತಿದಿನ ಸರಾಸರಿ ೫೦ ಸಾವಿರ ಮಂದಿ ಭಕ್ತಾದಿಗಳಿಗೆ ಶುಚಿ-ರುಚಿಯಾದ ಸರಳ ಸಾತ್ವಿಕ ಆಹಾರ ವಿತರಣೆ, ಎಲ್ಲವನ್ನೂ ಸ್ವಚ್ಛತೆಯೊಂದಿಗೆ ಬಳಸುವ ವಿಧಾನ, ಶಿಸ್ತು ಮತ್ತು ಊಟ ಮಾಡಿದ ಹಾಳೆತಟ್ಟೆ, ಬಾಳೆ ಎಲೆ ಇತ್ಯಾದಿಗಳ ನಿರ್ವಹಣೆ, ಅಡುಗೆ ಕೋಣೆಯಲ್ಲಿ ಬಳಸಿದ ನೀರನ್ನು ಶುದ್ಧೀಕರಿಸಿ ಮುಳಿಕ್ಕಾರು ತೋಟದ ಗಿಡಗಳಿಗೆ ಬಳಕೆ ಇತ್ಯಾದಿ ಬಗ್ಯೆ ವಿದ್ಯಾರ್ಥಿಗಳು ಮಾಹಿತಿ ಕಲೆ ಹಾಕಿದರು.ಅನ್ನದಾನ, ವಿದ್ಯಾದಾನ, ನ್ಯಾಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳ ಪರಂಪರೆ ಮತ್ತು ಮಾಹಿತಿ ಅವಲೋಕಿಸಿದರು.
ಕಾಲೇಜಿನ ಪ್ರಾಧ್ಯಾಪಕರಾದ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ. ಶರಣ್‌ಕುಮಾರ್ ಶೆಟ್ಟಿ ಹಾಗೂ ಪ್ರೊ. ದಿಶಾ ಸಿ. ಶೆಟ್ಟಿ, ಪ್ರೊ. ಕೀರ್ತನ್ ದೀಕ್ಷಿತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.