ಪರೀಕ್ಷೆಗಾಗಿ ಓದು ಸರಿಯಾದ ಕ್ರಮವಲ್ಲ: ಡಾ.ಆನಂದ ಪಾಂಡುರಂಗಿ

| Published : Dec 29 2024, 01:18 AM IST

ಪರೀಕ್ಷೆಗಾಗಿ ಓದು ಸರಿಯಾದ ಕ್ರಮವಲ್ಲ: ಡಾ.ಆನಂದ ಪಾಂಡುರಂಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸಮಯ ಪಾಲನೆ ರೂಢಿಸಿಕೊಂಡು ನಿರಂತರ ಅಧ್ಯಯನ ಮಾಡೆಬೇಕು. ಅದರೊಂದಿಗೆ ತಮ್ಮೊಳಗಿನ ಆತ್ಮ ವಿಶ್ವಾಸವೂ ಇರಬೇಕು

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸಮಯ ಪಾಲನೆ ರೂಢಿಸಿಕೊಂಡು ನಿರಂತರ ಅಧ್ಯಯನ ಮಾಡೆಬೇಕು. ಅದರೊಂದಿಗೆ ತಮ್ಮೊಳಗಿನ ಆತ್ಮ ವಿಶ್ವಾಸವೂ ಇರಬೇಕು ಎಂದು ಧಾರವಾಡದ ಖ್ಯಾತ ನರ-ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ಹೇಳಿದರು.

ಪಟ್ಟಣದ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ಸಭಾಭವನದಲ್ಲಿ ಎಸ್ಎಸ್ಎಲ್‌ಸಿ-87 ಸ್ನೇಹ ಬಳಗ ಹಮ್ಮಿಕೊಂಡಿದ್ದ ಪರೀಕ್ಷಾ ಸಂವಾದ ಟಾನಿಕ್-2025 ಕಾರ್ಯಕ್ರಮದಲ್ಲಿ ಮುಖ್ಯ ಸಂವಾದಕರಾಗಿ ಮಾತನಾಡಿ, ಅಭ್ಯಾಸದಲ್ಲಿ ನಿರಂತರ ಪ್ರಯತ್ನವಿರಬೇಕು. ಪರೀಕ್ಷೆಗಾಗಿ ಓದು ಸರಿಯಾದ ಕ್ರಮವಲ್ಲ. ಫಲಾಫೇಕ್ಷೆ ಬಗ್ಗೆ ಚಿಂತಿಸಬಾರದು. ಕಾಲ್ಪನಿಕತೆಯಿಂದ ಹೊರಬಂದು ವಾಸ್ತವಿಕತೆ ಅಳವಡಿಸಿಕೊಳ್ಳಬೇಕು. ವಿಷಯದ ಕುರಿತು ನಿರಂತರ ಚರ್ಚೆ ತುಂಬಾ ಅಗತ್ಯ. ನಮ್ಮೊಳಗೆ ನಾವು ವಿಶ್ವಾಸವಿಡಬೇಕು. ಇನ್ನೂ 2-3 ತಿಂಗಳು ಪರೀಕ್ಷೆಯಿರುವುದರಿಂದ ಸರಿಯಾದ ಯೋಜನೆ ರೂಪಿಸಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು. ದಿನಕ್ಕೆ 7-8 ತಾಸು ನಿದ್ದೆ, 3-4 ತಾಸು ಅಭ್ಯಾಸದಲ್ಲಿ ತೊಡಗಬೇಕು. ವೇಳೆಗೆ ಸರಿಯಾದ ಸಮಯ ಮತ್ತು ಏಕಾಗ್ರತೆಯ ಓದಬೇಕು. ವಾತಾವರಣವೂ ಇರಬೇಕು. ಅತಿಯಾದ ಆತಂಕ ಮತ್ತು ಒತ್ತಡಕ್ಕೆ ಒಳಗಾಗಬಾರದು ಎಂದರು.

ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಅನುಪಮಾ ಪಾಂಡುರಂಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈಹಿಕವಾಗಿ ದುರ್ಬಲರಾದಾಗ ನಮಗೆ ಟಾನಿಕ್ ಬೇಕು. ಅದೇ ರೀತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಮಾನಸಿಕ ಟಾನಿಕ್ ಬೇಕು. ಆಸಕ್ತಿ, ಏಕಾಗ್ರತೆ ಮತ್ತು ನಮ್ಮ ಸಾಮರ್ಥ್ಯ ದ ಮೇಲೆ ನಂಬಿಕೆ ಈಡಬೇಕು. ಅಂದಾಗ ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಲು ಮತ್ತು ಪರೀಕ್ಷೆಗಳನ್ನು ಎದುರಿಸುವ ಆತ್ಮ ವಿಶ್ವಾಸ ಬಲಗೊಳ್ಳುತ್ತದೆ ಎಂದರು.

ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಶ್ರೀಗಳು ಸಾನ್ನಿಧ್ಯವಹಿಸಿ ಮಾತಾಡಿದರು. ಪಿ.ಇ.ಟ್ರಸ್ಟ್‌ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ರಾಠಿ ಮತ್ತು ಕಾವಡೆ ಶಾಲೆಯ ಚೇರಮನ್ ಅಶೋಕ ಹೆಗಡಿ ಮತ್ತು ಹುಬ್ಬಳ್ಳಿಯ ಸಾರಥಿ ಫೌಂಡೇಶನ್ ಅಧ್ಯಕ್ಷೆ ಎಲ್. ಪಿ. ಹೆಗಡಿ ವೇದಿಕೆ ಮೇಲಿದ್ದರು. ಕೆ.ಆರ್.ರಾಯಚೂರ ಸ್ವಾಗತಿಸಿ ಪರಿಚಯಿಸಿದರು. ಸಂಚಾಲಕ ಡಾ.ಪಿ.ಎಸ್.ಹೆಗಡಿ ಪ್ರಾಸ್ತವಿಕವಾಗಿ ಮಾತನಾಡಿದರು. ನೀಲಪ್ಪ ಗಾಣಿಗೇರ, ಮಲ್ಲು ತಾಂಡೂರ್, ನಿಂಗಪ್ಪ ಅಲದಿ, ಗಂಗಾಧರ ಪತ್ತಾರ ಇದ್ದರು. ಶ್ರೀಕಾಂತ ಹುನಗುಂದ ನಿರೂಪಿಸಿದರು.ಮುರಿಗೇಶ ಶೇಖಾ ವಂದಿಸಿದರು.