ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವ್ಯಕ್ತಿತ್ವ ಮತ್ತು ಜೀವನ ಪರಿಪೂರ್ಣವಾಗಲು ಸ್ವಾಮಿ ವಿವೇಕಾನಂದರ ಅಧ್ಯಯನ ಅಗತ್ಯ ಎಂದು ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಹೇಳಿದರು.ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸನ್ಯಾಸಿಯಾಗಿ ಇಡೀ ದೇಶವನ್ನು ಅಲ್ಲದೆ ಇಡೀ ವಿಶ್ವವನ್ನು ಸಂಚರಿಸಿದ ಸ್ವಾಮಿ ವಿವೇಕಾನಂದರು ಸ್ವಯಂ ಪರಿವರ್ತನೆ ಹಾಗೂ ಸಮಾಜದ ಪರಿವರ್ತನೆಗಾಗಿ ಶ್ರಮಿಸಿದರು. ಭಾರತದ ಇತಿಹಾಸ ಹಾಗೂ ಹಿರಿಮೆ ಗರಿಮೆಗಳನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೆ ಎತ್ತಿ ತೋರಿಸಿದರು. ಇತಿಹಾಸಕಾರರು ವಿವೇಕಾನಂದರನ್ನು ಭಾರತದ ನವೋದಯದ ಅನರ್ಘ್ಯ ರತ್ನ ಎಂದು ಕರೆಯುತ್ತಾರೆ ಎಂದವರು ಹೇಳಿದರು.ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಸ್ವಾಮಿ ವಿವೇಕಾನಂದರ ಪರಿಕಲ್ಪನೆ ಹಾಗೂ ಅವರ ಚಿಂತನೆಗಳು ಇಂದು ಸಾಕಾರವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂದಿನ ಯುವಸಮೂಹ ತಮ್ಮ ಸಾಮರ್ಥ್ಯವನ್ನು ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ. ಭಾರತೀಯರು ಶ್ರೇಷ್ಠ ಸಾಂಸ್ಕೃತಿಕ ಹಿನ್ನೆಲೆಯ ವಾರಸುದಾರರು ಎಂದರು.ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಅವರು ದಿವ್ಯ ಸಾನಿಧ್ಯ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿಶೇಷ ಅವಧಿಗಳು ಹಾಗೂ ಸಂವಾದ ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಗದಗ ಮತ್ತು ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಅವರು ‘ಆಂತರಿಕ ಸಾಮರ್ಥ್ಯವನ್ನು ಜಾಗೃತಗೊಳಿಸಲು ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ’ ವಿಷಯದ ಕುರಿತು ಮಾತನಾಡಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಉಪನ್ಯಾಸಕ ಸಂತೋಷ್ ಆಳ್ವ ಎಕ್ಕಾರು ನಿರ್ವಹಿಸಿದರು. 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.