ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ವಿಜ್ಞಾನಿ ಅಥವಾ ಸ್ವಾಮೀಜಿಗಳಿಂದ ಸಮಾಜದಲ್ಲಿ ವೈಚಾರಿಕತೆ ಬೆಳೆಯದು, ವೈಚಾರಿಕತೆ ಜನರಿಂದಲೆ ಬೆಳೆಯಬೇಕಿದೆ ಎಂದು ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಮೈತ್ರಿವನದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಹಟ್ಟಿ ಚಿನ್ನದ ಗಣಿ ಕಂಪನಿ ಹಾಗೂ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ, ೨೦೨೪-೨೫ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಹಾಗೂ ಕೌಶಲ್ಯ ತರಬೇತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಧರ್ಮದ ಹೆಸರಲ್ಲಿ ಮೌಢ್ಯತೆ, ಅಂಧಾನುಕರಣೆ ಸಮಾಜದಲ್ಲಿದೆ. ಅದನ್ನು ನೋವುಂಡವರೆ ಜಾಗೃತಿ ಮೂಡಿಸಿಕೊಂಡು ನಿವಾರಿಸಿಕೊಳ್ಳುವ ಸ್ಥಿತಿ ಇದೆ. ಸುರಕ್ಷಿತ, ಸುಭೀಕ್ಷೆ ವಲಯದಲ್ಲಿರುವವರು ಜನ, ಸಮುದಾಯ ಮೇಲೆತ್ತಲು ಬರುವುದಿಲ್ಲ. ಸಮಾಜದಲ್ಲಿನ ದ್ರೋಹ, ಮೋಸ, ಢಂಬಾಚಾರ, ಅಂಧಾನುಕರಣೆ ಕೊನೆಗೊಳ್ಳಬೇಕೆಂದರೆ ವಿಜ್ಞಾನದಲ್ಲಿ ಧರ್ಮ ಹಾಗೂ ಧರ್ಮದಲ್ಲಿ ವಿಜ್ಞಾನದ ಅಂಶಗಳು ಮಿಳಿತವಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ದೇಶದಲ್ಲಿರುವ ಬಹು ಸಂಸ್ಕೃತಿ ವಿರುದ್ಧ ಏಕ ಸಂಸ್ಕೃತಿ ಹೇರುವುದು ನಮ್ಮ ಸಂಗಡಿಗರೊಂದಿಗೆ ೪೦ ವರ್ಷದಿಂದ ವಿರೋಧಿಸುತ್ತ ಬಂದಿದ್ದೇವೆ. ೨೦೨೦ರಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸ್ಥಾಪನೆ ಮೂಲಕ ಜನರಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಕಾರ್ಯ ಮತ್ತಷ್ಟು ವೇಗವಾಗಿ ನಡೆಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ಪರಿಷತ್ತಿನ ಪದಾಧಿಕಾರಿಗಳಾದ ಡಾ.ಸಿ.ಸೋಮಶೇಖರ್, ಎಸ್.ಕೆ.ಉಮೇಶ್, ಆರ್.ರವಿ ಬಿಳಿಶಿವಾಲೆ, ವೈ.ಎನ್.ಶಂಕರೇಗೌಡ, ಗೌರಿ ಪ್ರಸನ್ನ ಪಿ.ಎಸ್., ಡಾ.ಅಂಜಿನಪ್ಪ, ಡಾ.ಉಷಾದೇವಿ ಹಿರೇಮಠ, ಡಾ.ಜಿ.ಎಸ್.ಶ್ರಿಧರ್, ಪ್ರೊ.ಸುಧಾ ಹುಚ್ಚಣ್ಣವರ, ಡಾ.ಶ್ರೀರಾಮಚಂದ್ರ, ಎಂ.ಜಿ.ಶಶಿಕಲಾಮೂರ್ತಿ, ಚಿಕ್ಕ ಹನುಮಂತೇಗೌಡ, ಜಿ.ಒ.ಮಹಾಂತಪ್ಪ, ಎಸ್.ವೈ.ಹೊಂಬಾಳ್, ವಿ.ಟಿ.ಸ್ವಾಮಿ, ದಾನಿ ಬಾಬುರಾವ್, ಪಿ.ವಿ.ಸಿದ್ದಲಿಂಗಮ್ಮ ಹಾಗೂ ಇತರರಿದ್ದರು.
ವೀರಶೈವ, ಲಿಂಗಾಯತ, ಶರಣ ಪರಂಪರೆಯಲ್ಲಿ ಗಣಪತಿ ಆರಾಧನೆ ಇಲ್ಲ, ಪರಂಪರೆ ಇರುವ ಸಮುದಾದವರು ಗಣಪತಿ ಆರಾಧನೆ ಮಾಡಿಕೊಳ್ಳಲಿ ಎಂದಿದ್ದೆ. ಆದರೆ ಮಾಧ್ಯಮ ಮತ್ತು ಟೀಕಿಸುವವರು ನನ್ನ ಮಾತನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಲಿಲ್ಲ.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಮಠ