ಮನುಷ್ಯ ಸಂವೇದನೆಯ ಬಿಕ್ಕಟ್ಟಿಗೆ ಮೌಢ್ಯಾಚರಣೆಯೇ ಮೂಲ

| Published : Dec 08 2023, 01:45 AM IST

ಮನುಷ್ಯ ಸಂವೇದನೆಯ ಬಿಕ್ಕಟ್ಟಿಗೆ ಮೌಢ್ಯಾಚರಣೆಯೇ ಮೂಲ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಕೋಟ್ಯಂತರ ಭಾರತೀಯರ ವಿರುದ್ಧ ಬೆರಳೆಣಿಕೆಯಷ್ಟು ಬ್ರಿಟೀಷರು ನಂಬಿಕೆ ಮತ್ತು ಮೌಢ್ಯಗಳನ್ನು ಅಸ್ತ್ರವನ್ನಾಗಿಸಿ ಆಳಿದರು. ಮೌಢ್ಯದಿಂದಾಗಿ ದೇಶ ಸುಮಾರು 200 ವರ್ಷಗಳ ಕಾಲ ಪರಕೀಯರ ದಾಸ್ಯಕ್ಕೆ ಬಲಿಯಾಗಿತ್ತು ಎಂದು ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು.

ದೊಡ್ಡಬಳ್ಳಾಪುರ: ಕೋಟ್ಯಂತರ ಭಾರತೀಯರ ವಿರುದ್ಧ ಬೆರಳೆಣಿಕೆಯಷ್ಟು ಬ್ರಿಟೀಷರು ನಂಬಿಕೆ ಮತ್ತು ಮೌಢ್ಯಗಳನ್ನು ಅಸ್ತ್ರವನ್ನಾಗಿಸಿ ಆಳಿದರು. ಮೌಢ್ಯದಿಂದಾಗಿ ದೇಶ ಸುಮಾರು 200 ವರ್ಷಗಳ ಕಾಲ ಪರಕೀಯರ ದಾಸ್ಯಕ್ಕೆ ಬಲಿಯಾಗಿತ್ತು ಎಂದು ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು.

ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ನಗರದ ರೋಜಿಪುರದಲ್ಲಿರುವ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ಎಷ್ಟು ಉಳಿಸಿಕೊಂಡಿದ್ದೇವೆ ಎಂಬ ಪ್ರಶ್ನೆ ಎದುರಾಗಿದೆ. ಹಲವು ತಿದ್ದುಪಡಿಗಳ ಮೂಲಕ ಮೂಲ ಸಂವಿಧಾನಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿವೆ. ಜಾತಿಯ ಸಂಕೋಲೆಗಳಿಂದ ಹಳ್ಳಿಗಳು ತುಂಬಿ ನಾರುತ್ತಿವೆ. ವೈಜ್ಞಾನಿಕವಾಗಿ ಚಿಂತಿಸಿ ಸಹ ಮನುಷ್ಯನನ್ನು ಮನುಷ್ಯನಾಗಿ ಕಾಣಬೇಕಾದ ನಾವು ಸಹ ಮಾನವನನ್ನು ಪ್ರಾಣಿಗಳಂತೆ ನೋಡುತ್ತಿದ್ದೇವೆ ಎಂದರು.

ಪುರಾಣವನ್ನು ಚಾರಿತ್ರೀಕರಿಸಿ, ನಂಬಿಸಿ ಮೌಢ್ಯಗಳ ಮೂಲಕ ದೇಶವನ್ನು ಆಳಲಾಗುತ್ತಿದೆ. ಮೌಢ್ಯ ಎಂಬುದು ನಂಬಿಕೆಯ ಪ್ರಶ್ನೆಯಲ್ಲ ಜೀವನದ ಪ್ರಶ್ನೆಯಾಗಿದೆ. ಮನುಷ್ಯತ್ವದ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಮೌಢ್ಯಗಳನ್ನು ಬಿಡಬೇಕಾದರೆ ಕನಿಷ್ಟ ಸಾಮಾಜಿಕ ಕಳಕಳಿಯನ್ನಾದರೂ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ್ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನವನ್ನು ಬುಡಮೇಲು ಮಾಡುವಂತ ವ್ಯವಸ್ಥಿತ ಸಂಚು ನಡೆಯುತ್ತಿದೆ. ಮನುವಾದಿಗಳು ಪ್ರಜಾಸತಾತ್ಮಕ ವ್ಯವಸ್ಥೆಯನ್ನು ಅಳಿಸಲು ಯತ್ನಿಸುತ್ತಿದ್ದಾರೆ. ಒಬಿಸಿ, ದಲಿತ, ಅಲ್ಪಸಂಖ್ಯಾತ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪನ್ಯಾಸಕ ಪ್ರಕಾಶ್ ಮಂಟೇದ ಮಾತನಾಡಿ, ಕನಿಷ್ಟ ಪ್ರಜ್ಞೆ, ತಿಳಿವಳಿಕೆಯನ್ನಾದರೂ ಪ್ರಶ್ನಿಸುವಂತಾದರೆ ಮೌಢ್ಯತೆ ವಿರುದ್ಧ ಹೋರಾಟ ಮಾಡಬಹುದು. ನಮ್ಮ ಸಾಕುಪ್ರಾಣಿಗಳ ಮೇಲೆಯೂ ಮೌಢ್ಯಗಳನ್ನು ಭಿತ್ತಿ ಸಮಾಜದ ಧಿಕ್ಕನ್ನೇ ಬದಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಹೇಮಂತ್ ಪ್ರತಿಕ್ರಿಯಿಸಿ, ಇಂದು ವಿದ್ಯಾವಂತರೇ ಮೂಢನಂಬಿಕೆಗಳ ಮೌಢ್ಯಕ್ಕೆ ದಾಸರಾಗಿರುವುದು ವಿಷಾದನೀಯ ಸಂಗತಿ ಅದರಲ್ಲೂ ವಿಜ್ಞಾನ ಅರಿತು ಅಭ್ಯಾಸ ಮಾಡಿರುವ ವಿದ್ಯಾವಂತರೇ ಮೌಢ್ಯತೆಯ ಮರೆಹೋಗುತ್ತಿರುವುದು ಸರಿಯಲ್ಲ .ಸಾಮನ್ಯವಾಗಿ ಸ್ಮಶಾನಕ್ಕೆ ಬರಲು ಹೆದರುವ ಜನರ ನಡುವೆ ಇಂದು ಸ್ಮಶಾನದಲ್ಲಿ ಊಟ ಸವಿದಿದ್ದೇವೆ ಮೌಡ್ಯ ವಿರೋಧಿ ದಿನವನ್ನು ಆಚರಿಸಿದ್ದೇವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಸುದರ್ಶನ್, ಪ್ರೊ.ರಾಜ್‌ಕುಮಾರ್, ಪ್ರೊ.ಪಾಪಣ್ಣ, ವೇದಿಕೆಯ ಸಂಚಾಲಕರುಗಳಾದ ಆರ್. ಚಂದ್ರತೇಜಸ್ವಿ, ರಾಜುಸಣ್ಣಕ್ಕಿ, ವಕೀಲರಾದ ಮುನಿರಾಜು, ಅಶೋಕ್, ಕೆಂಪರಾಜು, ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಆನಂದ್, ದಲಿತ ಮುಖಂಡರಾದ ಮುನಿಯಪ್ಪ, ರಾಜಗೋಪಾಲ, ಮರಿಯಪ್ಪ, ಹನುಮಣ್ಣ ಗೂಳ್ಯ, ವಡ್ಡರಹಳ್ಳಿ ರಾಜಶೇಖರ್, ರತ್ನಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

7ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ರೋಜಿಪುರ ಸ್ಮಶಾನದಲ್ಲಿ ಮೌಢ್ಯ ವಿರೋಧಿ ದಿನಾಚರಣೆ ನಡೆಯಿತು.