ಸಾರಾಂಶ
ದೊಡ್ಡಬಳ್ಳಾಪುರ: ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸರ್ಕಾರ ಆದ್ಯತೆ ನೀಡಿ, ಎಲ್ಲ ಹಂತಗಳಲ್ಲಿ ಪರಿಣಾಮಕಾರಿ ಯೋಜನೆಗಳ ಜಾರಿಗೆ ಆದ್ಯತೆ ನೀಡಬೇಕು. ಆಧುನಿಕತೆ ಎಲ್ಲೆಡೆ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ವೇಳೆ, ದೇಶದಲ್ಲಿ ಮತ್ತೆ ಗತಕಾಲಕ್ಕೆ ಮರಳುವ ಸವಕಲು ನೀತಿಗಳನ್ನು ಜಾರಿಗೆ ತರುವ ಹುನ್ನಾರ ನಡೆದಿದೆ ಎಂದು ಸಾಮಾಜಿಕ ಚಿಂತಕ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಛಲವಾದಿ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಛಲವಾದಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.ಸರ್ಕಾರಗಳು ನೈಜ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಣದ ಪ್ರತಿಪಾದಕರಾಗಬೇಕು. ಕೃತಕ ಬುದ್ದಿಮತ್ತೆಯ ಯುಗದಲ್ಲಿ ಪರಂಪರೆಯ ಹೆಸರಿನಲ್ಲಿ ಮೌಢ್ಯವನ್ನು ಬಿತ್ತುವ ಪ್ರಯತ್ನ ನಿಲ್ಲಬೇಕು. ವಿದ್ಯಾರ್ಥಿಗಳು ಪ್ರಜ್ಞಾವಂತರಾಗಿ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು. ಓದು ಮಾತ್ರ ನಿರ್ದಿಷ್ಟ ಗುರಿಸಾಧನೆಯ ಮೂಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಕೆ.ಶಿವರಾಮ್ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ನಿರಂತರವಾದ ಅಧ್ಯಯನಕ್ಕೆ ಒತ್ತು ನೀಡಿ ಜನರಿಗೆ ಉತ್ತಮ ಸೇವೆ ನೀಡುವ ಅಧಿಕಾರಿಗಳಾಗಿ ಹೊರಹೊಮ್ಮುವುದು ಅಗತ್ಯ. ಕಡುಬಡತನದಲ್ಲಿ ಹುಟ್ಟಿಬೆಳೆದ ಅನೇಕ ಜನರು ಉತ್ತಮ ಸಾಧಕರಾಗಿರುವ ಉದಾಹರಣೆಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜ್ ಮಾತನಾಡಿ, ಸರ್ಕಾರ ಪರಿಶಿಷ್ಟ ವರ್ಗಗಳ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಇರುವ ನೆರವು ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸಲು ಉತ್ತಮವಾದ ವಾತಾವರಣ ಕಲ್ಪಿಸಿಕೊಡುವುದಲ್ಲದೇ, ವಿದ್ಯಾರ್ಥಿಗಳ ಕಡೆಗೆ ಹೆಚ್ಚು ಗಮನ ವಹಿಸಬೇಕಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉನ್ನತ ಶಿಕ್ಷಣಕ್ಕಾಗಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಒಂದು ಕೋಟಿ ರುಪಾಯಿಗಳವರೆಗೆ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.
2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಛಲವಾದಿ ಸಮುದಾಯದ ವಿದ್ಯಾರ್ಥಿಗಳಿಗೆ ಶ್ರೀ ದೀಪಂಕರ ಮೈತ್ರೆಯ ಸೋಷಿಯಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಕಿರು ಕಾಣಿಕೆ ನೀಡಿ, ಪ್ರೋತ್ಸಾಹಿಸಲಾಯಿತು.ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಸಿ.ಗುರುರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಲಿಗೆರೆಯ ನಿವೃತ್ತ ಅಭಿಯಂತರ ಕುಮಾರಸ್ವಾಮಿ, ಹೊಸಕೋಟೆಯ ಮುರಳಿ, ಮಹಾಸಭಾ ಪ್ರಧಾನ ಕಾರ್ಯದರ್ಶಿ ಮೂರ್ತಿ, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಮುಖಂಡರಾದ ದೊಡ್ಡರಂಗಪ್ಪ, ಮುನಿದಾಸಪ್ಪ, ಹನುಮಂತಯ್ಯ, ಲಕ್ಷ್ಮೀಪತಿ, ಣ್ಷ್ಣಪ್ಪ, ಉದಯಶಂಕರ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
18ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ಛಲವಾದಿ ಮಹಾಸಭಾದಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.