ಸಾರಾಂಶ
ಸೆ. 22ರಿಂದ ನಡೆಯುವ ಸಮೀಕ್ಷೆಯಲ್ಲಿ ಜಾತಿ ಹಾಗೂ ಉಪಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 209ರಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, 883ರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, 1384ರಲ್ಲಿ ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್ ಎಂದು ನಮೂದಿಸಿದ್ದು ಆಘಾತಕಾರಿ ವಿಷಯವಾಗಿದೆ.
ಕೊಪ್ಪಳ:
ಹಿಂದುಳಿದ ವರ್ಗದ ಆಯೋಗದಿಂದ ನಡೆಯುವ ಸಮೀಕ್ಷೆಯಲ್ಲಿ ಬ್ರಾಹ್ಮಣ ಉಪಜಾತಿ ಸೇರಿಸಿದ್ದಕ್ಕೆ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿ, ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮಂಗಳವಾರ ಮನವಿ ಸಲ್ಲಿಸಿದೆ.ಸೆ. 22ರಿಂದ ನಡೆಯುವ ಸಮೀಕ್ಷೆಯಲ್ಲಿ ಜಾತಿ ಹಾಗೂ ಉಪಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 209ರಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, 883ರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, 1384ರಲ್ಲಿ ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್ ಎಂದು ನಮೂದಿಸಿದ್ದು ಆಘಾತಕಾರಿ ವಿಷಯವಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ಉಪಜಾತಿ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕ್ರಮಸಂಖ್ಯೆಯ ಉಪಜಾತಿ ವರ್ಗೀಕರಣ ತೆಗೆದು ಹಾಕಬೇಕು. ಉಪಪಂಗಡಗಳ ಕುರಿತು ಸಮಾಜದ ಮುಖಂಡರು ಹಾಗೂ ತಜ್ಞರ ಜತೆಗೆ ಚರ್ಚಿಸಿದ ಬಳಿಕವೇ ಹೊಸ ಪಟ್ಟಿ ತಯಾರಿಸಬೇಕು ಎಂದು ಮುಖಂಡರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬ್ರಾಹ್ಮಣ ಸಮುದಾಯದಲ್ಲಿ 64 ಉಪಜಾತಿಗಳಲ್ಲಿ ಎಲ್ಲ ಜಾತಿಗಳಲ್ಲಿಯೂ ಹಿಂದೂ ಬ್ರಾಹ್ಮಣ ಎಂದು ಪರಿಗಣಿಸಬೇಕು. ಬ್ರಾಹ್ಮಣರನ್ನು ಈಗಾಗಲೇ ಅತ್ಯಂತ ದುರ್ಬಲ ಹಾಗೂ ಸಂಖ್ಯಾಬಲದಲ್ಲಿ ಅತ್ಯಲ್ಪರು ಎಂದು ಕಾಣಿಸುವ ಹುನ್ನಾರ ನಡೆದಿದ್ದು, ಇದಕ್ಕೆ ರಾಜ್ಯ ಸರ್ಕಾರದ ನಡೆ ಪುಷ್ಟಿ ನೀಡುವಂತಿದೆ. ಈ ರೀತಿಯ ಅಚಾತುರ್ಯ ಎಸಗಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮಹಾಸಭಾದ ಜಿಲ್ಲಾ ಚುನಾಯಿತ ಪ್ರತಿನಿಧಿ ಗುರುರಾಜ ಎನ್. ಜೋಶಿ, ರಾಜ್ಯ ಉಪಾಧ್ಯಕ್ಷ ಕೆ.ಜಿ. ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ, ರಾಜ್ಯ ಕೇಂದ್ರ ಕಾರ್ಯಕಾರಿಣಿ ಸದಸ್ಯ ಎಚ್.ಬಿ. ದೇಶಪಾಂಡೆ, ಮುಖಂಡರಾದ ವೇಣುಗೋಪಾಲ ಜಹಗೀರದಾರ್, ಡಿ.ವಿ. ಜೋಶಿ, ನಾಗೇಶರಾವ್ ದೇಶಪಾಂಡೆ, ಕೃಷ್ಣ ಪದಕಿ, ಮಧುಸೂದನ ಕುಲಕರ್ಣಿ, ವಿಶ್ವನಾಥ ದಿಕ್ಷೀತ್ ಸೇರಿದಂತೆ ಅನೇಕರು ಇದ್ದರು.