ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗಣಿಬಾಧಿತ ಪ್ರದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗುವುದೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗಣಿ ಮಾಲೀಕರು, ಅದಿರು ಸಾಗಾಣಿಕೆದಾರರು ಮತ್ತು ಗ್ರಾಮಸ್ಥರೊಂದಿಗಿನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಉಪ ವಿಭಾಗಾಧಿಕಾರಿಗಳು ಉಪ ಸಮಿತಿಯಲ್ಲಿ ಇರುತ್ತಾರೆ ಎಂದರು.
ಕಬ್ಬಿಣದ ಅದಿರು ತುಂಬಿದ ಲಾರಿಗಳು ಚಿತ್ರದುರ್ಗ ತಾಲೂಕಿನ ಕಡ್ಡೆಗುದ್ದು ಹಾಗೂ ಸಾಸಲು ಗ್ರಾಮಗಳ ಮುಖಾಂತರ ಸಂಚರಿಸುವಾಗ ಆಗುತ್ತಿರುವ ತೊಂದರೆ ಹಾಗೂ ವಾಹನಗಳನ್ನು ಪದೇ ಪದೇ ತಡೆದು ಪ್ರತಿಭಟನೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಯಾರು ಕೂಡ ಸಾರ್ವಜನಿಕ ರಸ್ತೆ ತಡೆ ಯುವುದಕ್ಕೆ ಅವಕಾಶವಿಲ್ಲ. ಸಮಸ್ಯೆಗಳು ಇದ್ದರೆ ಜಿಲ್ಲಾಡಳಿತದ ಬಳಿ ನಿವೇದಿಸಿಕೊಳ್ಳಬೇಕೆಂದರು.ಗಣಿಬಾಧಿತ ಪ್ರದೇಶಗಳ ಸ್ಥಳೀಯ ಗ್ರಾಮಸ್ಥರಿಗೂ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಮಸ್ಥರಿಗೆ ದೂಳಿನ ಸಮಸ್ಯೆ, ಕೃಷಿ ಚಟುವಟಿಕೆಗಳಿಗೆ ಆಗುತ್ತಿರುವ ತೊಂದರೆ, ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ದಟ್ಟಣೆ ಇತ್ಯಾದಿ ವಿಚಾರಗಳಿಗೆ ಸಂಬಂಧಪಟ್ಟಂತೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಉಪ ಸಮಿತಿ ಶ್ರಮಿಸಲಿದೆ ಎಂದರು.
ಹೆಚ್ಚಿನ ವಾಹನ ಸಂಚಾರ ದಟ್ಟಣೆಯ ಗಣಿಬಾಧಿತ ಪ್ರದೇಶಗಳ ಗ್ರಾಮಗಳ ರಸ್ತೆಯನ್ನು ಅಪ್‍ಗ್ರೇಡ್ ಮಾಡಿ ರಸ್ತೆ ದುರಸ್ತಿ ಹಾಗೂ ಸ್ಕೈವಾಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಸಂಬಂಧಪಟ್ಟ ಗಣಿ ಕಂಪನಿಗಳು ಕಡ್ಡಾಯವಾಗಿ ಮಾಡಬೇಕು. ಉಪ ಸಮಿತಿ ಶಿಫಾರಸ್ಸು ಮಾಡುವ ಎಲ್ಲ ಸಲಹೆ-ಸೂಚನೆಗಳಿಗೆ ಗಣಿ ಕಂಪನಿಗಳು ಕಡ್ಡಾಯ ವಾಗಿ ಬದ್ಧರಿರಬೇಕು. ಗಣಿ ಕಂಪನಿಗಳು ಅಗತ್ಯ ಸಹಕಾರ ನೀಡದಿದ್ದರೆ ಕಬ್ಬಿಣದ ಅದಿರು ಸಾಗಾಣಿಕೆ ಮಾಡುವ ವಾಹನಗಳ ಸಂಚಾರವನ್ನು ಸ್ಥಗಿತ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಸಿಎಸ್‍ಆರ್ ನಿಧಿ ಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಗಮನ ಹರಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗಣಿ ಪ್ರದೇಶಗಳ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಕ್ರಮ, ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಕಳೆದ ಕೆಲವು ತಿಂಗಳ ಹಿಂದೆ ಅದಿರು ತುಂಬಿದ ಲಾರಿಗಳ ಸಂಚಾರಕ್ಕೆ ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯ ಗ್ರಾಮಸ್ಥರು ತಡೆ ಮಾಡಿದ ದೂರುಗಳು ಬಂದಿದ್ದವು. ಸಾರ್ವಜನಿಕರ ರಸ್ತೆಯ ವಾಹನ ಸಂಚಾರವನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ತಡೆದರೆ ಕಾನೂನು ಚೌಕಟ್ಟಿನಲ್ಲಿ ಎಫ್‍ಐಆರ್ ದಾಖಲಿಸಬಹುದು ಎಂದರು.
ಗಣಿ ಪ್ರಾರಂಭದ ಸಂದರ್ಭದಲ್ಲಿ 10 ರಿಂದ 15 ವಾಹನಗಳ ಸಂಚಾರ ಇತ್ತು. ಪ್ರಸ್ತುತ ದಿನಗಳಲ್ಲಿ ನಿತ್ಯವೂ 150ಕ್ಕೂ ಹೆಚ್ಚು ವಾಹನಗಳ ಸಂಚಾರ ನಡೆಯುತ್ತಿದೆ. ದೂಳಿನ ಸಮಸ್ಯೆಯಿಂದಾಗಿ ಆರೋಗ್ಯದ ಮೇಲೆ ದುಷ್ಪಾರಿಣಾಮಗಳು ಬೀರುತ್ತಿವೆ. ಕಿರಿದಾದ ರಸ್ತೆ ಇರುವುದರಿಂದ ಬಹಳ ತೊಂದರೆಯಾಗುತ್ತಿದೆ ಎಂದು ಕಡ್ಲೇ ಗುದ್ದು, ಮೇಗಳಹಳ್ಳಿ, ಕಾಗಳಗೇರಿ, ಗ್ರಾಮಸ್ಥರು ಅಳಲು ತೋಡಿಕೊಂಡರು.ಜಾನ್ ಮೈನ್ಸ್ ಧನಂಜಯ ಮಾತನಾಡಿ, ಕಳೆದ ಐದು ತಿಂಗಳಿಂದ ಕಬ್ಬಿಣದ ಅದಿರು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೊಸಪೇಟೆ ಯಿಂದ ಅದಿರು ತಂದು ಘಟಕ ನಡೆಸಲಾಗುತ್ತಿದ್ದು, ತೊಂದರೆ ಉಂಟಾಗಿದೆ. ಹೀಗಾಗಿ ಸ್ಥಳೀಯವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಮಹೇಶ್, ಲೋಕೋ ಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಪರಿಸರ ಅಧಿಕಾರಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.