ಎಂಟೇ ವರ್ಷಗಳಲ್ಲಿ ಶಿಥಿಲವಾದ ಉಪನೋಂದಣಾಧಿಕಾರಿ ಕಚೇರಿ ಕಟ್ಟಡ!

| Published : May 25 2024, 12:47 AM IST

ಸಾರಾಂಶ

ಯಲಬುರ್ಗಾ ತಾಲೂಕಿನ ಹಿರಿಯ ಉಪನೋಂದಣಾಧಿಕಾರಿ ಕಚೇರಿ ಉದ್ಘಾಟನೆಗೊಂಡು ಎಂಟೇ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಬಿರುಕು ಬಿಟ್ಟಿದ್ದು, ಮಳೆ ಬಂದಾಗ ಅಲ್ಲಿಂದ ನೀರು ಸುರಿಯುತ್ತದೆ.

ಶಿವಮೂರ್ತಿ ಇಟಗಿ

ಯಲಬುರ್ಗಾ: ತಾಲೂಕಿನ ಹಿರಿಯ ಉಪನೋಂದಣಾಧಿಕಾರಿ ಕಚೇರಿ ಉದ್ಘಾಟನೆಗೊಂಡು ಎಂಟೇ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿದ್ದು, ಇಂದೋ ನಾಳೆಯೋ ಕುಸಿದು ಬೀಳುವ ಹಂತ ತಲುಪಿದೆ!

ಸರ್ಕಾರ ಕೂಡಲೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಈ ಕಟ್ಟಡ ಬೀಳಿಸುವ ಶ್ರಮ ತೆಗೆದುಕೊಳ್ಳಬೇಕಾದ ಆಗತ್ಯವಿಲ್ಲ, ಅದು ಸದ್ಯದಲ್ಲಿ ತಾನಾಗಿಯೇ ಬೀಳುತ್ತದೆ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.

ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಮಹತ್ವದ ಇಲಾಖೆಗಳಲ್ಲಿ ಈ ಹಿರಿಯ ಉಪನೋಂದಣಾಧಿಕಾರಿ ಇಲಾಖೆಯೂ ಒಂದಾಗಿದೆ. ಪಟ್ಟಣದ ಹಿರಿಯ ಉಪನೋಂದಣಾಧಿಕಾರಿ ಇಲಾಖೆ ಹಾಗೂ ವಿವಾಹ ನೋಂದಣಾಧಿಕಾರಿ ಅಧಿಕಾರಿಗಳ ಕಚೇರಿ ಕಟ್ಟಡ ಬಿರುಕು ಬಿಟ್ಟಿದೆ. ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡೆ ಬರಬೇಕಿದೆ.

ಈ ಕಟ್ಟಡ ಉದ್ಘಾಟನೆಗೊಂಡು ಕೇವಲ 8 ವರ್ಷಗಳು ಕಳೆದಿವೆ. ಈಗಲೇ ಎಲ್ಲೆಡೆ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂತೆಂದರೆ ಸಾಕು ನೀರು ಬಿರುಕು ಬಿಟ್ಟ ಕಟ್ಟಡದ ಮೂಲಕ ಒಳಗೆ ಹರಿದು ಬರುತ್ತಿದೆ. ಮಹತ್ವದ ದಾಖಲೆ ಕಾಯ್ದುಕೊಳ್ಳುವುದು ಸಿಬ್ಬಂದಿಗೆ ಕಷ್ಟದ ಕೆಲಸವಾಗಿದೆ. ಕೆಲವೊಮ್ಮೆ ಕಚೇರಿ ಕಟ್ಟಡದಲ್ಲಿ ವಿಷಜಂತುಗಳು ಸೇರಿಕೊಂಡ ಉದಾಹರಣೆಯೂ ಇದೆ. ಹೊರಗಿನಿಂದ ನೋಡಿದವರು ಈ ಕಟ್ಟಡ ಪ್ರವೇಶಿಸಲು ಭಯಪಡುವ ಪರಿಸ್ಥಿತಿ ಇದೆ.

ಗುತ್ತಿಗೆದಾರರು ಬೇಕಾಬಿಟ್ಟಿ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.ಯಲಬುರ್ಗಾ ಪಟ್ಟಣದಲ್ಲಿರುವ ಹಿರಿಯ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಟ್ಟಡ ಕಚೇರಿ ೨೦೧೫-೧೬ನೇ ಸಾಲಿನಲ್ಲಿ ಉದ್ಘಾಟನೆಗೊಂಡಿದೆ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎನಬೇಕೋ? ಅಥವಾ ಅಧಿಕಾರಿಗಳ ನಿರ್ಲಕ್ಷ್ಯ ಏನಬೇಕೋ? ಏಳೆಂಟು ವರ್ಷಗಳಲ್ಲಿ ಸರ್ಕಾರದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಜನರ ತೆರಿಗೆ ಹಣಕ್ಕೆ ಹೊಣೆ ಯಾರು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಪ್ರಶ್ನಿಸುತ್ತಾರೆ. ಹಿರಿಯ ಉಪ ನೋಂದಣಿ ಹಾಗೂ ವಿವಾಹ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ರೈತರು ಹಾಗೂ ಜನಸಾಮಾನ್ಯರ ಪಾಡು ಹೇಳತೀರದು. ಸೋಲಾರ್ ಹಾಗೂ ಫ್ಯಾನ್ ಕಂಪನಿಗಳ ಸಿಬ್ಬಂದಿ ಕಚೇರಿಗೆ ಬಂದರೆ ಇಲ್ಲಿಯ ಸಿಬ್ಬಂದಿ ತಮ್ಮ ಎಲ್ಲ ಕೆಲಸ ಕಾರ್ಯ ಬದಿಗೊತ್ತಿ ಅವರ ಕೆಲಸ ಮಾಡುತ್ತಾರೆ. ಜನಸಾಮಾನ್ಯರ ಕೆಲಸ ವಿಳಂಬವಾಗುತ್ತಿದೆ. ಆದಷ್ಟು ಬೇಗ ಈ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರವೇ ಯಲಬುರ್ಗಾ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಹೇಳುತ್ತಾರೆ.