2027ಕ್ಕೆ ಸಬ್‌ ಅಬರ್ಬನ್‌ ರೈಲು ಸಿದ್ಧ: ಎಂಬಿಪಾ

| Published : Feb 10 2024, 01:47 AM IST / Updated: Feb 10 2024, 11:31 AM IST

MBP

ಸಾರಾಂಶ

ಬೆಂಗಳೂರಿನ ಜನರ ಜೀವನವನ್ನು ಸುಗಮಗೊಳಿಸುವುದು ಸಬ್‌ ಅರ್ಬನ್ ರೈಲು ಯೋಜನೆಯ ಉದ್ದೇಶವಾಗಿದೆ. ಒಟ್ಟು ₹15,767 ಕೋಟಿ ವೆಚ್ಚದ ಈ ಯೋಜನೆ 2027ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಉಪನಗರ ರೈಲು ಯೋಜನೆಯಡಿ ನಿರ್ಮಾಣ ಆಗುತ್ತಿರುವ ನಾಲ್ಕು ಕಾರಿಡಾರ್‌ಗಳ 148 ಕಿ.ಮೀ. ರೈಲು ಮಾರ್ಗ ಹಾಗೂ 58 ರೈಲ್ವೆ ನಿಲ್ದಾಣಗಳ ನಿರ್ಮಾಣ ಕಾಮಗಾರಿ 2027ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. 

ಬಳಿಕ ನಿತ್ಯ 10 ಲಕ್ಷ ಜನರಿಗೆ ಪ್ರಯಾಣ ಸೇವೆ ಒದಗಿಸಲಿದೆ ಎಂದು ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಇಲಾಖೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ-ರೈಡ್ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯೂ ಆದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಮತ್ತು ಜರ್ಮನಿಯ ಕೆಎಫ್‌ಡಬ್ಲ್ಯೂ ಪರವಾಗಿ ಕೆಎಫ್‌ಡಬ್ಲ್ಯೂನ ಭಾರತದ ನಿರ್ದೇಶಕ ವೂಲ್ಫ್ ಮೌತ್ ಅವರು ₹4,561 ಕೋಟಿ ಸಾಲದ ಒಪ್ಪಂದಕ್ಕೆ ಸಹಿ ಹಾಕಿದರು.

ಬಳಿಕ ಮಾತನಾಡಿದ ಸಚಿವರು, ಬೆಂಗಳೂರಿನ ಜನರ ಜೀವನವನ್ನು ಸುಗಮಗೊಳಿಸುವುದು ಸಬ್‌ ಅರ್ಬನ್ ರೈಲು ಯೋಜನೆಯ ಉದ್ದೇಶ. ಒಟ್ಟು ₹15,767 ಕೋಟಿ ವೆಚ್ಚದ ಈ ಯೋಜನೆಯು 58 ನಿಲ್ದಾಣಗಳನ್ನು ಹೊಂದಿರಲಿದ್ದು, ಒಟ್ಟು 4 ಕಾರಿಡಾರ್‌ಗಳಲ್ಲಿ 148 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುವುದು. 

ಈ ಯೋಜನೆಗೆ ಕೇಂದ್ರ ಸರಕಾರದ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರಕಾರಗಳು ತಲಾ ಶೇಕಡ 20ರಷ್ಟು ಹೂಡಿಕೆ ಮಾಡಲಿದ್ದು, ಸಾಲದ ರೂಪದಲ್ಲಿ ಶೇ.60ರಷ್ಟು ಸಂಪನ್ಮೂಲ ಕ್ರೋಡೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ 3ನೇ ಕಾರಿಡಾರ್‌ನ ಕಾಮಗಾರಿ ನಡೆಯುತ್ತಿದ್ದು, ಮೂರು ಮತ್ತು ನಾಲ್ಕನೇ ಕಾರಿಡಾರ್‌ ನಿರ್ಮಾಣಕ್ಕಾಗಿ ಈ ಬ್ಯಾಂಕ್‌ನಿಂದ ಶೇ.60ರಷ್ಟು ಸಾಲ (₹4,561 ಕೋಟಿ) ಪಡೆಯಲು 2023 ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. 

ಈ ಸಾಲದ ಷರತ್ತುಗಳ ಕರಾರು ಪತ್ರಕ್ಕೆ ಇಂದು ಸಹಿ ಹಾಕಲಾಗಿದ್ದು, ವಾರ್ಷಿಕ ಶೇ.4ರ ಬಡ್ಡಿ ದರದ ಈ ಸಾಲ ಮರುಪಾವತಿಗೆ 20 ವರ್ಷಗಳ ಕಾಲಾವಧಿ ಇರಲಿದೆ ಎಂದು ಹೇಳಿದರು.

ಕೆಎಫ್ ಡಬ್ಲ್ಯು ನೀಡುತ್ತಿರುವ ಹಣವನ್ನು ಕೆಂಗೇರಿ-ವೈಟ್‌ಫೀಲ್ಡ್ ನಡುವಿನ ಕಾರಿಡಾರ್-3ರ ಅಡಿ ಬರುವ ಸ್ಟೇಷನ್ ವರ್ಕ್, ವಯಾಡಕ್ಟ್, ಹೀಳಲಿಗೆ-ರಾಜಾನುಕುಂಟೆ ನಡುವಿನ ಕಾರಿಡಾರ್-4ರ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಡಿಪೋ-1, ಸಿಗ್ನಲ್ ಮತ್ತು ಟೆಲಿಕಾಂ, ಪ್ಲಾಟ್ ಫಾರಂ ಸ್ಕ್ರೀನ್ ಡೋರ್, ಸ್ವಯಂಚಾಲಿತ ಪ್ರಯಾಣ ದರ ವಸೂಲಿ ವ್ಯವಸ್ಥೆ, ಸೌರ ಫಲಕ, ಭದ್ರತಾ ಸಾಧನಗಳು ಮತ್ತು ಎಂಎಐ (ಮ್ಯಾನ್ ಮಶೀನ್ ಇಂಟರ್ಫೇಸ್) ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಸಬರ್ಬನ್ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಪೂರೈಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಯು ರಾಜ್ಯದ ರಾಜಧಾನಿಯ ಚಹರೆಯನ್ನೇ ಬದಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿರುವ ಜರ್ಮನಿ ಕಾನ್ಸುಲ್ ಜನರಲ್ ಅಕಿಂ ಬರ್ಕಾರ್ಟ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕೆಎಫ್‌ಡಬ್ಲ್ಯೂ ಅಧಿಕಾರಿ ಸ್ವಾತಿ ಖನ್ನಾ ಮತ್ತು ಕಾಂಚಿ ಅರೋರ ಹಾಜರಿದ್ದರು.

ಪಾಯಿಂಟರ್ಸ್

 • 2027ರ ಡಿಸೆಂಬರ್‌ ವೇಳೆಗೆ 148 ಕಿ.ಮೀ. ಸಬ್‌ ಅರ್ಬನ್‌ ಸೇವೆ ಮುಕ್ತ
 • ಪ್ರತಿನಿತ್ಯ 10 ಲಕ್ಷ ಪ್ರಯಾಣಿಕರ ಸಂಚಾರ ಮಾಡುವ ನಿರೀಕ್ಷೆ
 • ಪ್ರಯಾಣಿಕರ ಸಂಖ್ಯೆ ಆಧರಿಸಿ ಮೆಟ್ರೋ ಮಾದರಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು
 • ವಾಸ್ತವವಾಗಿ ಪ್ರತಿ 2 ನಿಮಿಷಕ್ಕೆ ಒಂದು ರೈಲು ಸಂಚರಿಸಬಲ್ಲ ಸಿಗ್ನಲಿಂಗ್‌ ಸಾಮರ್ಥ್ಯಪಾಯಿಂಟರ್ಸ್

ಕಾರಿಡಾರ್‌ - 1

 • ಬೆಂಗಳೂರು - ದೇವನಹಳ್ಳಿ (41.4 ಕಿ.ಮೀ.)
 • ಮುಕ್ತಾಯ ಗಡುವು- ಡಿಸೆಂಬರ್‌ 2027

ಕಾರಿಡಾರ್‌ - 2

 • ಚಿಕ್ಕಬಾಣವಾರ- ಬೆನ್ನಿಗಾನಹಳ್ಳಿ (25.2 ಕಿ.ಮೀ.)
 • ಮುಕ್ತಾಯದ ಗಡುವು- ಜೂನ್‌ 2026

ಕಾರಿಡಾರ್‌- 3

 • ಕೆಂಗೇರಿ - ವೈಟ್‌ ಫೀಲ್ಡ್ (35.2 ಕಿ.ಮೀ.)
 • ಮುಕ್ತಾಯ ಗಡುವು- ಡಿಸೆಂಬರ್‌ 2027     

ಕಾರಿಡಾರ್ - 4

 • ಹೀಲಲಿಗೆ (ಬೊಮ್ಮಸಂದ್ರ) 
 • ರಾಜಾನುಕುಂಟೆ (46.24 ಕಿ.ಮೀ)
 • ಮುಕ್ತಾಯ ಗಡುವು - ಡಿಸೆಂಬರ್‌ 2027