- ಜಿಮ್‌ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಮಾಡಿದ ಸಂಘಟನೆಗಳ ಮುಖಂಡರು: ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಮ್ ಜಿಹಾದ್ ಆರೋಪದಲ್ಲಿ ಸರಸ್ವತಿ ನಗರದ ಪವರ್ ಫಿಟ್ನೆಸ್ ಜಿಮ್‌ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಮಾಡಿದ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಕಾನೂನು ಕೈಗೆತ್ತಿಕೊಂಡು, ಜನರು ನೆಮ್ಮದಿಯಿಂದಿರಲು ಬಿಡುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು.ಹಿಂದೂ ಸಂಘಟನೆಗಳ ಮುಖಂಡರಾದ ಮಣಿಕಂಠ, ಸತೀಶ ಪೂಜಾರಿ ಇತರರು ಜಿಮ್ ಮುಂದೆ ಗಲಾಟೆ ಮಾಡಿ, ಅಲ್ಲಿನ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ. ಜಿಮ್‌ನವರಿಂದ ಯಾವುದೇ ದುಷ್ಕೃತ್ಯ ನಡೆದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು. ಅದನ್ನು ಬಿಟ್ಟು, ಜಿಮ್‌ಗೆ ನುಗ್ಗಿ ಗಲಾಟೆ ಮಾಡಿ, ಬೋರ್ಡ್‌ಗಳನ್ನು ಕಿತ್ತು ಹಾಕಿ, ನಷ್ಟಗೊಳಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನೈತಿಕ ಪೊಲೀಸ್‌ಗಿರಿ ಮೆರೆಯುತ್ತಿರುವ ಇಂತಹವರಿಗೆ ದೊಂಬಿ, ಗಲಾಟೆ ಮಾಡಲು ಅನುಮತಿ ಕೊಟ್ಟವರು ಯಾರು? ಈ ಎಲ್ಲ ವಿಚಾರಗಳನ್ನು ಗೃಹ ಮಂತ್ರಿ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿ ಬಳಿಯೂ ಮಹಾಸಭಾದಿಂದ ನಿಯೋಗ ಹೋಗಿ ದೂರು ನೀಡುತ್ತೇವೆ. ಪೊಲೀಸ್ ಇಲಾಖೆ ಇದ್ದರೂ ನೈತಿಕ ಪೊಲೀಸ್‌ಗಿರಿ ಮೆರೆಯಲು ಇಂತಹವರೆಲ್ಲಾ ಯಾರು ಎಂದು ಅವರು ಪ್ರಶ್ನಿಸಿದರು.
ಐಷಾರಾಮಿ ಮನೆ, ದುಬಾರಿ ಕಾರನ್ನು ಹೊಂದಿರುವ ಇಂತಹ ಸಂಘಟನೆ ಮುಖಂಡರ ಆದಾಯದ ಮೂಲ ಏನು? ಆದಾಯ ತೆರಿಗೆ ಇಲಾಖೆ ಇಂತಹವರ ಬಗ್ಗೆ ಏನು ಕ್ರಮ ಕೈಗೊಂಡಿದೆ? ಆದಾಯ ತೆರಿಗೆ ಇಲಾಖೆಗೂ ಈ ಬಗ್ಗೆ ಮಹಾಸಭಾ ದೂರು ದಾಖಲಿಸಲಿದೆ. ಜಿಮ್ ಟ್ರೈನರ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆ ಅಂತಹವರ ವಿರುದ್ಧ ದೂರು ನೀಡಿ, ಜೈಲಿಗೆ ಕಳಿಸಲಿ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಸುಭಾನ್ ಖಾನ್ ಹೇಳಿದರು.
ಪವರ್ ಫಿಟ್ನೆಸ್ ಜಿಮ್‌ನ ಇಸ್ಮಾಯಿಲ್ ತಂದೆ ರಸೂಲ್, ತಾಯಿ ರಜಿಯಾ ಬೇಗಂ, ಅಲ್ಲಾಬಕ್ಷಿ, ಫರ್ವೇಜ್, ಜಿಮ್ ಟ್ರೈನರ್ ಮೊಮೀನ್, ಮೊಹಮ್ಮದ್ ಫಾರೂಕ್ ಇತರರು ಇದ್ದರು.- - -
(ಬಾಕ್ಸ್) * ಮಗನಿಗೆ ಹನಿಟ್ರ್ಯಾಪ್ ಮಾಡಿದ್ದಾರೆ: ರಜಿಯಾ ಬೇಗಂ- ದಾವಣಗೆರೆ ಪವರ್ ಫಿಟ್ನೆಸ್ ಜಿಮ್‌ನ ಇಸ್ಮಾಯಿಲ್ ತಾಯಿ ಆರೋಪ ದಾವಣಗೆರೆ: ತಮ್ಮ ಮಗ ಇಸ್ಮಾಯಿಲ್‌ಗೆ ಜೀವನಕ್ಕೆಂದು ಸಾಲ ಮಾಡಿ, ಪವರ್ ಫಿಟ್ನೆಸ್ ಜಿಮ್ ಮಾಡಿಕೊಟ್ಟಿದ್ದು, ಆತನಿಗೆ 12 ಹುಡುಗಿಯರ ಜೊತೆಗೆ ಅಫೇರ್ ಇಲ್ಲ. ಒಬ್ಬಳ ಜೊತೆಗೆ ಮಾತ್ರ ಅಕ್ರಮ ಸಂಬಂಧ ಇತ್ತು ಎಂದು ಸರಸ್ವತಿ ಬಡಾವಣೆಯ ಪವರ್ ಫಿಟ್ನೆಸ್ ಜಿಮ್ ಮಾಲೀಕ ಮತ್ತು ಟ್ರೈನರ್ ಇಸ್ಮಾಯಿಲ್‌ನ ತಾಯಿ ರಜಿಯಾ ಬೇಗಂ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಗ ಇಸ್ಮಾಯಿಲ್‌ಗೆ ಹನಿಟ್ರ್ಯಾಪ್ ಮಾಡಿ, ₹10 ಲಕ್ಷಗಳಿಗೆ ಆ ಮಹಿಳೆ ಬೇಡಿಕೆ ಇಟ್ಟಿದ್ದಳು. ಹೇಗೋ ದುಡ್ಡು ಹೊಂದಿಸಿ, ₹4 ಲಕ್ಷ ನೀಡಿದ್ದೆವು. ಹಾಗಾಗಿ, ಇಷ್ಟೆಲ್ಲಾ ರಾದ್ಧಾಂತವನ್ನು ಆಕೆ ಮಾಡಿದ್ದಾಳೆ ಎಂದರು.ಘಟನೆ ಕುರಿತಂತೆ ತಮ್ಮ ಮಗ ಇಸ್ಮಾಯಿಲ್, ಹನಿಟ್ರ್ಯಾಪ್ ಮಾಡಿದ ಆ ಮಹಿಳೆ ಸೇರಿದಂತೆ ಎಲ್ಲರನ್ನೂ ಪೊಲೀಸ್ ಇಲಾಖೆ ತನಿಖೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. 3 ವರ್ಷದ ಹಿಂದೆ ಸಾಲ ಮಾಡಿ, ಇಸ್ಮಾಯಿಲ್ ಗೆ ಸ್ವಂತ ಜಿಮ್ ಮಾಡಿಕೊಟ್ಟಿದ್ದೆವು. ಅದಕ್ಕೂ ಮುನ್ನ ಆತ ಆರೆಂಜ್ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಬಿಟ್ಟ ನಂತರ ಇಲ್ಲಿ ಸ್ವಂತದ ಜಿಮ್ ಮಾಡಿದ್ದ ಎಂದು ಅವರು ತಿಳಿಸಿದರು.
ಕಳೆದೊಂದು ತಿಂಗಳಿನಿಂದ ಆ ಮಹಿಳೆ ತಮ್ಮ ಮಗನಿಗೆ ಹನಿಟ್ರ್ಯಾಪ್ ಮಾಡಿದ್ದಾಳೆ. ಜಿಮ್‌ನ ಸಿಸಿ ಕ್ಯಾಮೆರಾ ಡಿವಿಆರ್, ನನ್ನ ಮಗನ ಮೊಬೈಲ್, ಸೋಷಿಯಲ್ ಮೀಡಿಯಾ, ಆ ಮಹಿಳೆಯ ಮೊಬೈಲ್, ಸೋಷಿಯಲ್ ಮೀಡಿಯಾ ಎಲ್ಲವನ್ನು ತನಿಖೆ ಮಾಡಬೇಕು. ಜಿಮ್‌ನ ಸಿಸಿ ಕ್ಯಾಮೆರಾಗಳ ಕೋಡ್ ಸಹ ಆಕೆ ಬಳಿ ಇವೆ. ಇಸ್ಮಾಯಿಲ್‌ನ ಹೆಂಡತಿ 4 ತಿಂಗಳ ಗರ್ಭಿಣಿಯಾಗಿದ್ದು, ತವರಿನಲ್ಲಿದ್ದಾಳೆ. ಈಗ ತಮ್ಮ ಮಗ ಹಾಗೂ ತಮ್ಮ ಕುಟುಂಬದ ಗೌರವ ಬೀದಿಗೆ ಬಂದಿದೆ ಎಂದು ರಜಿಯಾ ಬೇಗಂ ದೂರಿದರು.- - -
-14ಕೆಡಿವಿಜಿ7: ದಾವಣಗೆರೆಯಲ್ಲಿಮಂಗಳವಾರ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್, ಪವರ ಫಿಟ್ನೆಸ್ ಜಿಮ್ ಮಾಲೀಕ ಇಸ್ಮಾಯಿಲ್ ರಜಿಯಾ ಬೇಗಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.