ಯಾವ ಟೆಂಡರ್ ಮೂಲಕ ಕಾಮಗಾರಿಗಳನ್ನು ನೀಡಲಾಗಿದೆ. ವಿದ್ಯುತ್ ಮತ್ತು ಜನರೇಟರ್ ವ್ಯವಸ್ಥೆಗೆ ಎಷ್ಟು ಹಣ ಖರ್ಚಾಗಿದೆ. ಸಂಸ್ಥೆ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬಿದ್ದಿದೆಯೇ. ಈ ಎಲ್ಲ ವಿಷಯಗಳ ಕುರಿತು ಸ್ವತಂತ್ರ ತಾಂತ್ರಿಕ ಮತ್ತು ಹಣಕಾಸು ಪರಿಶೀಲನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಆಗ್ರಹಿಸಿದರು.

ಪಟ್ಟಣದ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಜೀವನಾಡಿ ಮನ್ಮುಲ್ ನಲ್ಲಿ ನಡೆದಿರುವ ವಿವಿಧ ಹಗರಣಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಮೆಗಾ ಡೇರಿ ನಿರ್ಮಾಣ, ವಿದ್ಯುತ್ ವ್ಯವಸ್ಥೆ, ಜನರೇಟರ್ ಬಳಕೆ ಹಾಗೂ ಸಂಬಂಧಿತ ವೆಚ್ಚಗಳ ಕುರಿತು ಅನುಮಾನ ಮೂಡಿದೆ ಎಂದರು.

ಯಾವ ಟೆಂಡರ್ ಮೂಲಕ ಕಾಮಗಾರಿಗಳನ್ನು ನೀಡಲಾಗಿದೆ. ವಿದ್ಯುತ್ ಮತ್ತು ಜನರೇಟರ್ ವ್ಯವಸ್ಥೆಗೆ ಎಷ್ಟು ಹಣ ಖರ್ಚಾಗಿದೆ. ಸಂಸ್ಥೆ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬಿದ್ದಿದೆಯೇ. ಈ ಎಲ್ಲ ವಿಷಯಗಳ ಕುರಿತು ಸ್ವತಂತ್ರ ತಾಂತ್ರಿಕ ಮತ್ತು ಹಣಕಾಸು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕಳೆದ ಹಲವು ವರ್ಷಗಳಿಂದ ಹಣಕಾಸು, ನೇಮಕಾತಿ, ಹಾಲು ಸಾಗಣೆ, ಟೆಂಡರ್, ಖರೀದಿ ಹಾಗೂ ಮೆಗಾ ಡೇರಿಗೆ ಸಂಬಂಧಿಸಿದಂತೆ ವಿವಿಧ ಆರೋಪಗಳು ಮತ್ತು ಗಂಭೀರ ಪ್ರಶ್ನೆಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಭ್ರಷ್ಟಾಚಾರ ಮುಕ್ತಗೊಳಿಸಿ ಹಾಲು ಉತ್ಪಾದಕ ರೈತರ ಹಿತರಕ್ಷಣೆ ಮಾಡಬೇಕಾದ ಆಡಳಿತ ಮಂಡಳಿಯು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಆರೋಪಿಸಿದರು

ರೈತರ ಹಾಲನ್ನು ಸಂಗ್ರಹಿಸಿ ಅದರ ಮೂಲಕ ರೂಪಗೊಂಡಿರುವ ಮನ್ಮುಲ್ ಯಾವುದೇ ವ್ಯಕ್ತಿ ಅಥವಾ ಆಡಳಿತ ಮಂಡಳಿಯ ಖಾಸಗಿ ಆಸ್ತಿಯಲ್ಲ. ಇದು ಹಾಲು ಉತ್ಪಾದಕರ ಸಹಕಾರಿ ಸಂಸ್ಥೆಯಾಗಿದೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ಲೆಕ್ಕ ನೀಡಬೇಕಾದ ಜವಾಬ್ದಾರಿ ಆಡಳಿತ ಮಂಡಳಿಗಿದೆ ಎಂದರು.

ಮನ್ಮುಲ್ ಹಿಂದಿನ ಆಡಳಿತಕ್ಕೆ ಸಂಬಂಧಿಸಿದಂತೆ ಸುಮಾರು 72 ಕೋಟಿರು. ಹಣಕಾಸು ಅವ್ಯವಹಾರದ ಆರೋಪಗಳು ಕೇಳಿಬಂದಿವೆ. ಈ ಅನೇಕ ಆರೋಪಗಳ ಬಗ್ಗೆ ಸೂಕ್ತ ತನಿಖೆ ಅಗತ್ಯವಿದೆ. ಕಳೆದ 10 ವರ್ಷಗಳ ಮನ್ಮುಲ್ ಹಣಕಾಸು ವ್ಯವಹಾರಗಳಿಗೆ ವಿಶೇಷ ಆಡಿಟ್/ಫೊರೆನ್ಸಿಕ್ ಆಡಿಟ್ ನಡೆಸಬೇಕು. ಪ್ರಮುಖ ಟೆಂಡರ್, ಗುತ್ತಿಗೆ, ಖರೀದಿ ಮತ್ತು ಪಾವತಿಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಎಂ.ಇ ಮಹದೇವು, ಕಾರ್ಯದರ್ಶಿ ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಹಿಪ್ಜುಲ್ಲಾ, ನಾಗಮಣಿ, ನಂಜುಂಡಸ್ವಾಮಿ, ಸಿದ್ದರಾಜು, ನಾಗರಾಜು ಪಾಲ್ಗೊಂಡಿದ್ದರು.