ವಿದ್ಯಾರ್ಥಿಗಳಿಗೆ ವಿಷಯ ಗ್ರಹಿಕೆ ಮುಖ್ಯ: ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ

| Published : Aug 21 2024, 12:42 AM IST

ವಿದ್ಯಾರ್ಥಿಗಳಿಗೆ ವಿಷಯ ಗ್ರಹಿಕೆ ಮುಖ್ಯ: ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಮೊದಲು ನಿಖರವಾದ ಗುರಿ ಇಟ್ಟುಕೊಳ್ಳಬೇಕು. ಸಮಯ ನಿರ್ವಹಣೆಯ ಕೌಶಲ ಗೊತ್ತಿದ್ದಾಗ ಆತ್ಮವಿಶ್ವಾಸ ಹೆಚ್ಚುತ್ತದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಶಿಸ್ತುಬದ್ಧ ಪ್ರಯತ್ನವೇ ಯಶಸ್ಸಿನ ಹಿಂದಿನ ಗುಟ್ಟು ಎಂದು ಖ್ಯಾತ ಮನೋವೈದ್ಯ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ ಕಿವಿಮಾತು ಹೇಳಿದರು.

ನಗರದ ರಾಮ ಮಂದಿರ ಹತ್ತಿರವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕೆ, ನೆನಪು ಹಾಗೂ ಏಕಾಗ್ರತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮೊದಲು ನಿಖರವಾದ ಗುರಿ ಇಟ್ಟುಕೊಳ್ಳಬೇಕು. ಸಮಯ ನಿರ್ವಹಣೆಯ ಕೌಶಲ ಗೊತ್ತಿದ್ದಾಗ ಆತ್ಮವಿಶ್ವಾಸ ಹೆಚ್ಚುತ್ತದೆಎಂದರು.

ಅಂಕಗಳಿಕೆಗಿಂತ ಜ್ಞಾನಾರ್ಜನೆ ಮುಖ್ಯ:

ವಿದ್ಯಾರ್ಥಿಗಳು ಅಂಕಗಳಿಗೆ ಹೆಚ್ಚು ಆದ್ಯತೆ ನೀಡದೆ ಮುಖ್ಯವಾಗಿ ಪಠ್ಯವನ್ನುಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ತರಗತಿಯಲ್ಲಿ ಪಠ್ಯವನ್ನು ಏಕಾಗ್ರತೆಯಿಂದ ಆಲಿಸುವುದರಿಂದ ನಮ್ಮ ಮೆದುಳು ಸಮರ್ಥವಾಗಿ ವಿಷಯ ಸಂಗ್ರಹ ಮಾಡಿಕೊಳ್ಳುತ್ತದೆ. ವಿಷಯ ಗ್ರಹಿಕೆ ಹಾಗೂ ಮೇಲಿಂದ ಮೇಲೆ ಸ್ಮರಿಸಿಕೊಳ್ಳುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಓದಿದ್ದನ್ನು ಬರೆಯುವುದರಿಂದ ವಿಷಯವು ನಮ್ಮ ಮೆದುಳಿನಲ್ಲಿ ದಾಖಲಾಗುತ್ತದೆ ಎಂದು ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.

ಪದ್ಮಶ್ರೀ ಪದಕ ಮಕ್ಕಳ ಕೈಗೆ:

ಶಾಲೆಯ ಪರವಾಗಿ ವಿಶೇಷ ಗೌರವ ಸನ್ಮಾನ ಸ್ವೀಕರಿಸಿ ತಾವು ಪಡೆದ ಪದ್ಮಶ್ರೀ ಪದಕವನ್ನು ಮಕ್ಕಳು ಮುಟ್ಟಿ ನೋಡಲಿ ಎಂದು ಮಕ್ಕಳ ಕೈಗೆ ಕೊಟ್ಟರು. ಪ್ರತಿ ವಿದ್ಯಾರ್ಥಿ ಅದನ್ನು ಮುಟ್ಟಿ ಪುಳಕಿತಗೊಂಡ ಸನ್ನಿವೇಶ ವಿಶೇಷವಾಗಿತ್ತು. ನಂತರ ಮಕ್ಕಳ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸರಿ ಉತ್ತರಗಳನ್ನು ನೀಡಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಹುರಿದುಂಬಿಸಿದರು. ತಾವೂ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಿ ಇಂತಹ ಪುರಸ್ಕಾರಕ್ಕೆ ಭಾಜನರಾಗಬೇಕೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಸುವರ್ಣಾಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಸಾಮಾಜಿಕ ಚಿಂತಕ ಎಸ್.ಎಸ್. ಹಿರೇಮಠ, ಮುಖ್ಯೋಪಾಧ್ಯಯ ಅಂಬಿಕಾ ರೆಡ್ಡಿ, ಶಿಕ್ಷಣ ಸಂಯೋಜಕಿ ಸುಮಾ ಭಗವತಿ ಹಾಗೂ ಸುಷ್ಮಾ ಭಗವತಿ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ನಿಖಿಲ್ ಪಾಟೀಲ್ ಸ್ವಾಗತಿಸಿದರು, ಕನ್ನಡ ಶಿಕ್ಷಕ ರಾಜು ರಾಠೋಡ ವಂದಿಸಿದರು.